ಬೆಂಗಳೂರು: ಎಫ್ಎಸ್ಎಸ್ಎಐ ಪ್ರಮಾಣ ಪತ್ರವಿಲ್ಲದೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚರಿಸಿದೆ.
ಮಹಾನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯದ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ 9ವಾರ್ಡ್ಗಳು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ 5 ವಾರ್ಡ್ ಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು, ತಾವು ತಯಾರಿಸಿ ಮಾರಾಟ ಮಾಡುವ ಆಹಾರ ಪದಾರ್ಥಗಳು ಸುರಕ್ಷತೆಯಿಂದ, ಸ್ವಚ್ಛತೆಯಿಂದ ಮತ್ತು ಗುಣಮಟ್ಟದಿಂದ ಸಾರ್ವಜನಿಕರಿಗೆ ಮಾರಾಟ ಮಾಡುವುದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅತ್ಯವಶ್ಯವಾಗಿರುತ್ತದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ವತಿಯಿಂದ ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ಗುಣಮಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಿ ಪಾಲಿಕೆ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು ಎಂದಿದೆ.
ಫೆಬ್ರವರಿ 28 ಲಾಸ್ಟ ಡೇಟ್: ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಎಲ್ಲ ಬೀದಿಬದಿ ವ್ಯಾಪಾರಿಗಳು ತರಬೇತಿ ಮತ್ತು ಪ್ರಮಾಣಪತ್ರ ಪಡೆಯಲು ತಮ್ಮ ವಿವರಗಳೊಂದಿಗೆ 18ನೇ ಕ್ರಾಸ್, ಐಡಿಯಲ್ ಹೋಮ್ಸ್ ಟೌನ್ ಶಿಪ್ ಬಳಿಯ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯದ ಕಲ್ಯಾಣಾಧಿಕಾರಿಗಳ ಕಚೇರಿಗೆ (ಕಲ್ಯಾಣ ಶಾಖೆ) ಸಂಪರ್ಕಿಸಿ ಫೆಬ್ರವರಿ 28 ರೊಳಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ತಿಳಿಸಿದೆ.