ಬೆಂಗಳೂರು: ಹೆಬ್ಬಾಳದ ಬಳಿಯಿರುವ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆದಿತ್ಯ ಆಳ್ವಾ ಹೆಸರಿನಲ್ಲಿರುವ ಮನೆ ಹಾಗೂ ಸುತ್ತಮುತ್ತ ಪ್ರದೇಶ ಸುಮಾರು 5.9 ಎಕರೆ ಇದೆ. ಮನೆ ಪಕ್ಕದಲ್ಲಿರುವ ಜಾಗವನ್ನು 2018ರಲ್ಲಿ ರೆಸಾರ್ಟ್ ಮಾಡಿಕೊಂಡಿದ್ದರು. ಅನಂತರ ರೆಸಾರ್ಟ್ ಮುಚ್ಚಲಾಗಿತ್ತು. ಅದನ್ನು ಉದ್ದಿಮೆ ಪರವಾನಗಿ ಇಲ್ಲದೆ ನಡೆಸುತ್ತಿದ್ದರು. ರೆಸಾರ್ಟ್ನಲ್ಲಿ ಬೇರೆ ಬೇರೆ ರೀತಿಯ ಚಟುವಟಿಕೆ ನಡೆಯುತಿತ್ತು. ಇದಕ್ಕೆ ಯಾವುದೇ ರೀತಿಯ ಪರವಾನಗಿ ಮಾಡಿಸಿಕೊಂಡಿರಲಿಲ್ಲ. ಈಗ ಗೆಸ್ಟ್ ಹೌಸ್ ಒತ್ತುವರಿಯಾಗಿರುವ ಬಗ್ಗೆ ಗಮನ ಹರಿಸುವುದಾಗಿ ಬಿಬಿಎಂಪಿ ಎಆರ್ ಓ ಡಾ.ಬಸವರಾಜ್ ಮಾಗಿ ತಿಳಿಸಿದ್ದಾರೆ.
ಬಫರ್ ಝೋನ್ಗೆ ಬರುತ್ತೆ ಹಾಗೂ ಖಾತೆ ತಪ್ಪಾಗಿದೆ ಎಂದು ದೂರು ಬಂದಿದೆ. ಯಲಹಂಕ ಜಂಟಿ ಆಯುಕ್ತರ ಆದೇಶದ ಮೇರೆಗೆ ಬಂದಿದ್ದೇವೆ. ಇವತ್ತು ಪರಿಶೀಲನೆ ನಡೆಸಿ ಸಂಜೆ ಒಳಗೆ ಕಮೀಷನರ್ಗೆ ಮಾಹಿತಿ ನೀಡುತ್ತೇವೆ. ಒತ್ತುವರಿ ಆಗಿದ್ದರೆ ತೆರೆವುಗೊಳಿಸುತ್ತೇವೆ. ಮೊದಲು ರೆಸಾರ್ಟ್ ಇತ್ತಂತೆ, ಈಗ ಕ್ಲೋಸ್ ಮಾಡಿದ್ದಾರೆ. ಟ್ರೇಡ್ ಲೈಸನ್ಸ್ ಇಲ್ಲದೇ ಪಾರ್ಟಿಗಳನ್ನು ನಡೆಸುತ್ತಿದ್ದರು ಎಂದು ಜಂಟಿ ಆಯುಕ್ತರು ಸಹ ಮಾಹಿತಿ ನೀಡಿದ್ದಾರೆ. 2018 ರಿಂದ ಟ್ರೇಡ್ ಲೈಸೆನ್ಸ್ ರಿನಿವಲ್ ಮಾಡಿಸಿಕೊಂಡಿಲ್ಲ. ಹಾಗಾಗಿ ಯಾವುದೇ ರೀತಿಯ ತಪ್ಪು ಕಂಡು ಬಂದರೆ ಕೆಎಂಸಿ ಆ್ಯಕ್ಟ್ ಪ್ರಕಾರ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.