ಬೆಂಗಳೂರು: ಬಿಬಿಎಂಪಿಯ ಒಂದಲ್ಲ ಒಂದು ಕಾಮಗಾರಿ, ಯೋಜನೆಗೆ ಹಗರಣದ ಕಳಂಕ ತಪ್ಪಿದ್ದಲ್ಲ. ಇದೀಗ ಸ್ವತಃ ಮೇಯರ್ ಗೌತಮ್ ಕುಮಾರ್, ಈ ಹಿಂದೆ ಅಳವಡಿಸಿದ್ದ ವೈಜ್ಞಾನಿಕ ಡಸ್ಟ್ ಬಿನ್ ಖರೀದಿ ಟೆಂಡರ್ ಅನ್ನು ತನಿಖೆಗೆ ಒಪ್ಪಿಸಿದ್ದಾರೆ.
ವೈಜ್ಞಾನಿಕ ಡಸ್ಟ್ ಬಿನ್ ಹೆಸರಲ್ಲಿ ಅವೈಜ್ಞಾನಿಕವಾಗಿ ಕಸದ ಡಬ್ಬಿಗಳನ್ನು ನಗರದಲ್ಲಿ ಅಳವಡಿಸಲಾಗಿದೆ. ಅಲ್ಲದೆ ಕಸದ ಡಬ್ಬಿಗಳನ್ನು ಅಳವಡಿಸಿದ ಜಾಗದಲ್ಲೆಲ್ಲ ಬ್ಲಾಕ್ ಸ್ಪಾಟ್ ಉಂಟಾಗಿದೆ. ಅಷ್ಟೇ ಅಲ್ಲದೆ ಹೊರದೇಶದಲ್ಲಿ 98 ಸಾವಿರ ವೆಚ್ಚದ ಕಸದ ಡಬ್ಬಿಯನ್ನು, ನಮ್ಮ ನಗರದಲ್ಲಿ 5,58,000 ರೂಪಾಯಿ ವೆಚ್ಚ ಮಾಡಿರುವುದು ಎಷ್ಟು ಸರಿ. ಇದರಲ್ಲಿ ಅಧಿಕಾರಿಗಳ ಪಾಲೂ ಇದೆ. ಹೀಗಾಗಿ ಈ ಟೆಂಡರ್ ಸಂಪೂರ್ಣ ಬಿಲ್ ಪಾವತಿ ಮಾಡದೆ ತಡೆಹಿಡಿಯಲು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ಈ ಹಿಂದೆ ಲೆಕ್ಕಪತ್ರ ಸ್ಥಾಯಿಸಮಿತಿಯ ಸದಸ್ಯರಾಗಿದ್ದಾಗಲೂ, ವೈಜ್ಞಾನಿಕ ಡಸ್ಟ್ ಬಿನ್ ವಿರುದ್ಧ ಧ್ವನಿ ಎತ್ತಿದ್ದ ಗೌತಮ್ ಕುಮಾರ್, ಮೇಯರ್ ಆದ ಬಳಿಕ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಟೆಂಡರ್ನಲ್ಲಿ ಗುತ್ತಿಗೆದಾರರು ಹೇಳಿರುವ ಪ್ರಕಾರ ಮುನ್ನೂರು ಟನ್ ಕಸ ಎತ್ತಿದರೆ ನಗರದಲ್ಲಿ ಕಸವೇ ಉಳಿಯೋದಿಲ್ಲ. ಹೀಗಾಗಿ ಸುಳ್ಳು ಲೆಕ್ಕಾಚಾರ ನೀಡಿ, ಅವೈಜ್ಞಾನಿಕವಾಗಿ ನಗರದಲ್ಲಿ ಡಸ್ಟ್ ಬಿನ್ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಯೋಜನೆ ಜಾರಿಯಾಗುವ ಮೊದಲೇ ಸ್ಥಳಗಳನ್ನು ಗುರುತಿಸದೆ 130 ಸ್ಥಳಗಳಲ್ಲಿ ಅಳವಡಿಸೋದಾಗಿ ಹೇಳಿರುವುದು ಎಷ್ಟು ಸರಿ. ಇದರಿಂದ ಕೊಟ್ಟಿರುವ ಹಣವನ್ನೂ ವಸೂಲಿ ಮಾಡಲು ಕ್ರಮಕೈಗೊಳ್ಳುವುದಾಗುವುದೆಂದು ಮೇಯರ್ ತಿಳಿಸಿದರು.