ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ಸ್ಥಾಪಿಸಿರುವ ಕೋವಿಡ್-19 ಕಮಾಂಡ್ ಸೆಂಟರ್ಗೆ ಇಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ವೇಳೆ ಕೋವಿಡ್ ಕಮಾಂಡ್ ಸೆಂಟರ್ನಲ್ಲಿನ ವ್ಯವಸ್ಥೆ ಹಾಗೂ ಕಾರ್ಯ ಚಟುವಟಿಕೆಗಳ ಕುರಿತು ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ. ಅಲ್ಲದೆ ದಾಸರಹಳ್ಳಿ ವಲಯದಲ್ಲಿರುವ ಕೋವಿಡ್ ಪ್ರಕರಣಗಳು, ಹೋಮ್ ಐಸೊಲೇಷನ್, ಪ್ರಥಮ ಸಂಪರ್ಕಿತರು, ದ್ವಿತೀಯ ಸಂಪರ್ಕಿತರು, ಕಂಟೈನ್‌ಮೆಂಟ್ ಪ್ರದೇಶ, ಆಂಬ್ಯುಲೆನ್ಸ್ ಹಾಗೂ ಮೃತದೇಹಗಳನ್ನು ಸಾಗಿಸುವ ವಾಹನ, ಫೀವರ್ ಕ್ಲಿನಿಕ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕೋವಿಡ್ ಸೆಂಟರ್ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಜೊತೆ ಕೆಲಕಾಲ ಚರ್ಚಿಸಿ, ಕೋವಿಡ್ ಸೋಂಕಿತರೊಡನೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ನೀಡಿದರು. ನೀವು ಅವರಿಗೆ ಕರೆ ಮಾಡಿದಾಗ ಭಯಪಡದಿರಲು ರೋಗಿಗಳಿಗೆ ತಿಳಿಸಬೇಕು. ಆಗಾಗ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಪಲ್ಸ್ ಆಕ್ಸಿಮೀಟರ್ನಲ್ಲಿ ಸ್ವಯಂ ತಪಾಸಣೆ ಮಾಡಿಕೊಳ್ಳಲು ತಿಳಿಹೇಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಸೇವನೆ ಮಾಡಲು ತಿಳಿಸುವಂತೆ ಕಂಟ್ರೋಲ್ ರೂಮ್ ಸಿಬ್ಬಂದಿಗಳಿಗೆ ಸಲಹೆ ನೀಡಿದ್ದಾರೆ.