ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟನಿಟ್ಟಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಸಂಪರ್ಕಿತರ ಪತ್ತೆಹಚ್ಚುವಿಕೆಗೆ ಹೆಚ್ಚಿನ ಒತ್ತು ನೀಡಿದ್ದು, ಅವರು ಓಡಾಟ ನಡೆಸದಂತೆ ಕಂಟೇನ್ಮೆಂಟ್ ಮಾಡಲು ಕ್ರಮ ಕೈಗೊಂಡಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು, ಕೋವಿಡ್ ಪರೀಕ್ಷೆಯ ಹೆಚ್ಚಳ, ಸಂಪರ್ಕಿತರ ಪತ್ತೆ ಹಚ್ಚುವಿಕೆ, ಕಂಟೇನ್ಮೆಂಟ್ಗಳನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಮೇಲ್ವಿಚಾರಣೆಯನ್ನು 54 ಮಾರ್ಷಲ್ಗಳ ತಂಡ ನಡೆಸುತ್ತಿದೆ. ತಜ್ಞರ ಸಮಿತಿ ಹೊಸ ತಳಿಯ ಕುರಿತು ಹೆಚ್ಚಿನ ಮಾಹಿತಿ ಕೊಡಲಿದ್ದು, ಆ ಪ್ರಕಾರ ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದರು.
ನಗರದಲ್ಲಿ ಒಂದು ವಾರದೊಳಗೆ ಜೀನೋಮ್ ಸೀಕ್ವೆನ್ಸ್ ಪರೀಕ್ಷಾ ವರದಿ ಬರುವುದಕ್ಕೆ ಕ್ರಮ ವಹಿಸಲಾಗಿದೆ. ನಿತ್ಯವೂ ಪಾಸಿಟಿವ್ ಬಂದವರಲ್ಲಿ ಹೆಚ್ಚು ವೈರಲ್ ಲೋಡ್ ಇರುವ 10-15 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಲಸಿಕೆ ಪಡೆದವರಲ್ಲಿ ಕೋವಿಡ್ ಕಡಿಮೆ ಪರಿಣಾಮ ಬೀರಲಿದೆ. ಹೀಗಾಗಿ ಪ್ರತಿಯೊಬ್ಬರೂ ಎರಡು ಡೋಸ್ ಕೋವಿಡ್ ಲಸಿಕೆ ಪಡೆಯಬೇಕೆಂದು ತಿಳಿಸಿದರು.
ಒಮಿಕ್ರಾನ್ ದೃಢಪಟ್ಟ ವ್ಯಕ್ತಿಯ ಕಾಂಟ್ಯಾಕ್ಟ್ ಟ್ರೇಸಿಂಗ್ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಪೊಲೀಸರ ನೆರವು ಪಡೆದು ಮಾಡಲಾಗುವುದು ಎಂದರು.
ಇದನ್ನೂ ಓದಿ: ಲಸಿಕೆ ಪಡೆದರೂ ಹೆಮ್ಮಾರಿ Omicron ಅಟ್ಯಾಕ್: ಹೊಸ ತಳಿ ಎಷ್ಟು ಡೇಂಜರಸ್ ಗೊತ್ತಾ..?