ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಯಾವುದೇ ಅನುಮತಿ ಇಲ್ಲದೇ ರಸ್ತೆ ಅಗೆದ ಟೆಲಿಕಾಂ ಕಂಪನಿಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದ್ದು, ಒಟ್ಟು 25 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮಹದೇವಪುರದ ವಿನಾಯಕನಗರದಲ್ಲಿ ಬಿಬಿಎಂಪಿ ಹೊಸದಾಗಿ ಹಾಕಲಾಗಿದ್ದ ರಸ್ತೆಯನ್ನು ಅಗೆದ ನಂತರ ಇಲ್ಲಿನ ನಿವಾಸಿಗಳು ಸಂಕಷ್ಟ ಎದುರಿಸಿದ್ದರು. ಇದೇ ರೀತಿಯಲ್ಲಿ ನಗರದ ವಿವಿಧ ವಾರ್ಡ್ಗಳಲ್ಲೂ ರಸ್ತೆ ಅಗೆದ ಪ್ರಕರಣಗಳು ಬೆಳಕಿಗೆ ಬಂದಿವೆ.
ದಂಡ ಕಟ್ಟಲು ಪಾಲಿಕೆ ಸೂಚನೆ: ಈ ವರ್ಷದ ಸೆಪ್ಟೆಂಬರ್‌ನಲ್ಲಿ ಟೆಲಿಕಾಂ ಪೂರೈಕೆದಾರರಾದ ಜಿಯೋ ಡಿಜಿಟಲ್ ಫೈಬರ್ ಪ್ರೈವೇಟ್ ಲಿಮಿಟೆಡ್, ಭಾರತಿ ಏರ್‌ಟೆಲ್ ಲಿಮಿಟೆಡ್, ಟೆಲಿಸಾನಿಕ್ ನೆಟ್‌ವರ್ಕ್ಸ್ ಲಿಮಿಟೆಡ್ ಮತ್ತು ವಿಎಸಿ ಟೆಲಿನ್‌ಫ್ರಾ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಅನುಮತಿಯಿಲ್ಲದೇ ರಸ್ತೆಗಳನ್ನು ಅಗೆಯಲು ಮತ್ತು ಟೆಲಿಕಾಂ ಟವರ್‌ಗಳನ್ನು ಸ್ಥಾಪಿಸಿದ್ದರು. ಈ ಸಂಬಂಧ ಆಂತರಿಕ ತನಿಖೆ ನಡೆಸಿ ತಲಾ 25 ಲಕ್ಷ ರೂ. ದಂಡ ಕಟ್ಟಲು ಪಾಲಿಕೆ ಸೂಚಿಸಿದೆ.
ರಸ್ತೆ ಗುಂಡಿ ಸಮಸ್ಯೆಗೆ ಕಾರಣವಾದ ರಸ್ತೆ ಅಗೆಯುವ (ರೋಡ್ ಕಟ್ಟಿಂಗ್) ಸಾರ್ವಜನಿಕರಿಗೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಪ್ರಸಕ್ತ ವರ್ಷದಲ್ಲಿ ಮಳೆ ಪ್ರಮಾಣ ಹೆಚ್ಚಾದ ಕಾರಣ ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆಯೂ ಉಲ್ಬಣವಾಗುವಂತಾಗಿತ್ತು. ಈವರೆಗೆ ನಗರದಲ್ಲಿ 32 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಅದರಲ್ಲಿ ಶೇ. 95ಕ್ಕೂ ಹೆಚ್ಚಿನ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಗುಂಡಿ ಕ್ಲೋಸ್: ಪ್ರಮುಖವಾಗಿ ಮುಖ್ಯ ಮತ್ತು ಉಪ ಮುಖ್ಯರಸ್ತೆಗಳಲ್ಲಿನ ಬಹುತೇಕ ಗುಂಡಿಗಳನ್ನು ಮುಚ್ಚಲಾಗಿದೆ. ಇದೀಗ ವಾರ್ಡ್ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗುತ್ತಿದೆ. ಅದರ ಜತೆಗೆ ವಾರ್ಡ್ ರಸ್ತೆಗಳಲ್ಲಿ ನೀರಿನ ಪೈಪ್ ದುರಸ್ತಿ ಸೇರಿ ಇನ್ನಿತರ ಕಾರಣಕ್ಕಾಗಿ ಸಾರ್ವಜನಿಕರು ರಸ್ತೆ ಅಗೆದರೆ ದಂಡ ವಿಧಿಸುವ ಬಗ್ಗೆ ನಿರ್ಧರಿಸಲಾಗಿದೆ. ರಸ್ತೆ ಅಗೆಯುವವರನ್ನು ಪತ್ತೆ ಮಾಡಿ , ಅವರಿಗೆ ದಂಡ ವಿಧಿಸುವಂತೆ ಹಿರಿಯ ಅಧಿಕಾರಿಗಳು ವಾರ್ಡ್ ಇಂಜಿನಿಯರ್ಗಳಿಗೆ ಸೂಚಿಸಿದ್ದಾರೆ.
ಓದಿ: ಪಾಲಿಕೆಯಿಂದ 5 ವರ್ಷಗಳ ನಂತರ ಬೀದಿ ಬದಿ ವ್ಯಾಪಾರಿಗಳು, ಮಾರಾಟ ಪ್ರದೇಶಗಳ ಸಮೀಕ್ಷೆ