ಬೆಂಗಳೂರು: ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣಾ ಸಮಿತಿಯಲ್ಲಿ ಅತ್ಯಂತ ಸ್ವಚ್ಛವಾಗಿರುವ ನಗರಗಳಿಗೆ ರ್ಯಾಂಕ್ ನೀಡುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾತ್ರ ಕೋಟ್ಯಂತರ ರೂಪಾಯಿ ವೆಚ್ಚಮಾಡಿದ್ರೂ ಈವರೆಗೂ ಉತ್ತಮ ರ್ಯಾಂಕ್ ಬಂದಿಲ್ಲ. 2019 ರಲ್ಲಿ 194 ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಬಿಬಿಎಂಪಿ , 2020 ರ ಸರ್ವೇಯಲ್ಲಿ 20ನೇ ರ್ಯಾಂಕ್ ಪಡೆಯಲು ಪಣ ತೊಟ್ಟಿದೆ.
ನಗರದ ಸ್ವಚ್ಛತೆ, ಪ್ಲಾಸ್ಟಿಕ್, ತ್ಯಾಜ್ಯ ನಿರ್ವಹಣೆ, ಮೂಲ ಸೌಕರ್ಯಗಳನ್ನ ಆಧರಿಸಿ ನಡೆಸುವ ಸಮೀಕ್ಷೆಯಲ್ಲಿ ರ್ಯಾಂಕ್ ನೀಡಲಾಗುತ್ತದೆ. 2020 ಕ್ಕೆ ಟಾಪ್ 20 ಕ್ಕೆ ಏರಲು ಕಳೆದ ಬಾರಿ ಆಗಿರುವ ತಪ್ಪುಗಳನ್ನ ಪರಮರ್ಶಿಸಿ, ಅವುಗಳನ್ನ ತಿದ್ದಿಕೊಳ್ಳಲು ಪಾಲಿಕೆ ಸದಸ್ಯರೆಲ್ಲ ಸೇರಿ ಸಭೆ ನಡೆಸಿದ್ದಾರೆ. ಇನ್ನು ಈ ಬಾರಿ ಪಾಲಿಕೆ ಜೊತೆ ಕೆಲವು ಸ್ವಯಂ ಸೇವಕ ಸಂಸ್ಥೆಗಳು ಕೈ ಜೋಡಿಸಿದ್ದು, ಬೆಂಗಳೂರು ನಗರವನ್ನು ಉತ್ತಮ ಸ್ಥಾನಕ್ಕೆ ಕೊಂಡೋಗುವ ನಂಬಿಕೆ ವ್ಯಕ್ತ ಪಡಿಸಿದೆ. ಮೊದಲು ಜನರಲ್ಲಿ ಜಾಗೃತಿ ಮೂಡಿಸ ಬೇಕು. ಪ್ಲಾಸ್ಟಿಕ್ ನಿರ್ವಹಣೆಯಲ್ಲಿ ನಾವು ಹಿಂದೆ ಬಿದ್ದಿಲ್ಲ. ನಮ್ಮನ್ನ ನೋಡಿ ಬೇರೆ ರಾಜ್ಯಗಳು ದೇಶಗಳು ಕಲಿಯುತ್ತಿವೆ. ಮುಂದಿನ ಸಮೀಕ್ಷೆಯಲ್ಲಿ ಬೆಂಗಳೂರನ್ನು ಕೊಂಚ ಮೇಲು ಮಟ್ಟಕ್ಕೆ ತರುತ್ತೇವೆ ಎಂದು ಬೆಂಗಳೂರು ಇಕೋ ಟೀಂ ಸದಸ್ಯೆ ಅನ್ನಪೂರ್ಣ ತಿಳಿಸಿದ್ದಾರೆ.
ನಗರದ ರ್ಯಾಂಕ್ ಬಗ್ಗೆ ಪ್ರಮುಖ ಚರ್ಚೆಯಾಗುತ್ತಿದ್ರೂ ಕೂಡ ಕೆಲವು ಪಾಲಿಕೆ ಸದಸ್ಯರು ಮಾತ್ರ ಸಭೆಗೆ ಗೈರಾಗಿ ಬೇಜವಾಬ್ದಾರಿನ್ನ ತೋರಿದ್ದಾರೆ.