ಬೆಂಗಳೂರು: ತ್ಯಾಜ್ಯ ನಿರ್ವಹಣೆ ಬಗ್ಗೆ ಜನಜಾಗೃತಿ ಮೂಡಿಸಿರುವ ಬಿಬಿಎಂಪಿ, ಇದೀಗ ದಂಡ ಹಾಕುವ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಬೆಂಗಳೂರು ನಾಗರಿಕರು ರಸ್ತೆ ಬದಿ ಕಸ ಎಸೆಯುವುದನ್ನು, ಮಿಶ್ರ ಕಸ ನೀಡುವುದನ್ನು, ಬ್ಲಾಕ್ ಸ್ಪಾಟ್ ನಿರ್ಮಾಣದಂತಹ ಬೇಜವಾಬ್ದಾರಿ ಕೆಲಸಗಳಿಗೆ ಕಣ್ಗಾವಲಾಗಿ ಕೆಲಸ ನಿರ್ವಹಿಸಲು ಬಿಬಿಎಂಪಿ ಮಾರ್ಷಲ್ಗಳ (ನಿವೃತ್ತ ಸೈನಿಕರು) ನೇಮಕ ಮಾಡಿದ ಬೆನ್ನಲ್ಲೇ ಎರಡು ವಾರದಲ್ಲಿ ಬರೋಬ್ಬರಿ ನಾಲ್ಕು ಲಕ್ಷ ದಂಡ ವಿಧಿಸಲಾಗಿದೆ.
ಈಗಾಗಲೇ 160 ವಾರ್ಡ್ಗಳಲ್ಲಿ ಮಾರ್ಷಲ್ಗಳು ವಿವಿಧ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, 13 ದಿನದಲ್ಲಿ 4,10,130 ರೂಪಾಯಿ ದಂಡ ಹಾಕಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್, ಈಟಿವಿ ಭಾರತ್ಗೆ ತಿಳಿಸಿದರು. ಪೌರಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಾರಾ, ಗುತ್ತಿಗೆದಾರರು ಪ್ರತೀ ರಸ್ತೆಗೆ ಆಟೋ ಟಿಪ್ಪರ್ ಕೊಂಡೊಯ್ಯತ್ತಾರಾ ಎಂದು ಪರಿಶೀಲಿಸುವ ಜೊತೆಗೆ ಸಾರ್ವಜನಿಕರ ಕಸ ನಿರ್ವಹಣೆ ಬಗ್ಗೆಯೂ ಮಾರ್ಷಲ್ಗಳು ಹದ್ದಿನ ಕಣ್ಣಿಡಲಿದ್ದಾರೆ.
ಅಷ್ಟೇ ಅಲ್ಲದೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದವರಿಗೂ ದಂಡದ ಬರೆ ಬೀಳಲಿದೆ. ರಾತ್ರಿ ವೇಳೆ ರಸ್ತೆ ಬದಿ, ಬ್ಲಾಕ್ ಸ್ಪಾಟ್ಗಳಲ್ಲಿ ಕಸ ಎಸೆಯುವವರನ್ನೂ ಹಿಡಿದು ದಂಡ ಹಾಕುವ ಅಧಿಕಾರ ಮಾರ್ಷಲ್ಗಳಿಗೆ ನೀಡಲಾಗಿದೆ. ದಂಡ ಹಾಕಿದ ವಿವರವನ್ನು ಮಾರ್ಷಲ್ಗಳು ಹನ್ನೊಂದು ಮಂದಿ ಸೂಪರ್ ವೈಸರ್ಗಳಿಗೆ ನೀಡಲಿದ್ದಾರೆ. ಈ ಎಲ್ಲಾ ಮಾಹಿತಿಗಳು ಬಳಿಕ ಪಾಲಿಕೆ ಅಧಿಕಾರಿಗಳಿಗೆ ತಲುಪಲಿದೆ ಎಂದು ರಂದೀಪ್ ತಿಳಿಸಿದರು.