ಬೆಂಗಳೂರು: ಡಿಸೆಂಬರ್ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ. 243 ವಾರ್ಡಗಳಿಗೂ ಚುನಾವಣೆ ಮಾಡುತ್ತೇವೆ. ನಾವು ರಾಜಕಾರಣ ಮಾಡುವುದಿಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬಸವನಗುಡಿ, ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುನ್ನ ಬಿಬಿಎಂಪಿ ಚುನಾವಣೆ ಆಗಲಿದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮೇಯರ್ ಇಟ್ಟುಕೊಂಡೇ ಲೋಕಸಭೆ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದರು.
ಚುನಾವಣೆ ಬೇಗ ಆಗಬೇಕೆಂದು ನಮ್ಮ ಪಕ್ಷದವರೇ ಕೇಸ್ ಹಾಕಿದ್ದು. ಬಿಜೆಪಿಯವರು ಡಿಲಿಮಿಟೇಷನ್ ಮನಸೋಇಚ್ಛೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದೇವೆ. ವಾರ್ಡ್ ವಿಂಗಡಣೆ ವಿಚಾರ ಅಧಿಕಾರಿಗಳ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಾವು ಇದಕ್ಕೆ ಕೈ ಹಾಕುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನಾವು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಪ್ರಾದೇಶಿಕ ವಿಂಗಡಣೆ ಮಾಡಿದ್ವಿ ಯಾರು ಸಹ ಕೋರ್ಟ್ ಗೆ ಹೋಗಿರಲಿಲ್ಲ. ಈಗ ಬಿಜೆಪಿ ಅವರು ರಾಜಕೀಯವಾಗಿ ವಾರ್ಡ್ ಪುನರ್ ವಿಂಗಡನೆ ಮಾಡಿದ್ರು. ಹಾಗಾಗಿ ಇವಾಗ ಹೊಸದಾಗಿ ವಾರ್ಡ್ ಪುನರ್ ವಿಂಗಡನೆ ಮಾಡಲು ತಿಳಿಸಲಾಗಿದೆ. ಬಿಬಿಎಂಪಿ ಹೊಸ ಆ್ಯಕ್ಟ್ ಪ್ರಕಾರ 243 ವಾರ್ಡ್ ಗಳಿಗೆ ಚುನಾವಣೆ ಮಾಡುತ್ತೇವೆ. ಎಲ್ಲ ಕಾಲದಲ್ಲೂ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಿದ್ದೇವೆ. ಈ ಬಾರಿಯೂ ನಾವು ಚುನಾವಣೆ ಮಾಡುತ್ತೇವೆ. ಬಿಬಿಎಂಪಿ ಎಲೆಕ್ಷನ್ ಗೂ ನಿವೃತ ಐಎಎಸ್ ಅಧಿಕಾರಿ ಬಿ ಎಸ್ ಪಾಟೀಲ್ ಕಮಿಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ಬಡವರ ಬಗ್ಗೆ ಕಾಳಜಿ ಇಲ್ಲ: ಬಿಜೆಪಿ ಸರ್ಕಾರಕ್ಕೆ ಕಾಳಜಿ ಇದ್ದರೆ ಅಕ್ಕಿ ಕೊಡೋರು. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿಯವರಿಗೆ ಅದಾನಿ, ಅಂಬಾನಿ ಬಗ್ಗೆ ಹೆಚ್ಚು ಕಾಳಜಿ ಇದೆ. ಅವರಿಗೆ ಸಾಲ ಮನ್ನಾ ಮಾಡಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಾರೆ. ಬಿಜೆಪಿ ನಾಯಕರು ಶ್ರೀಮಂತರ ಪರವಾಗಿದ್ದಾರೆ. ಬಿಜೆಪಿ ನಾಯಕರು ಈ ಅಕ್ಕಿ ತಿನ್ನುತ್ತಾರಾ?. ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ರಾಮಲಿಂಗಾರೆಡ್ಡಿ ಹರಿಹಾಯ್ದರು.
ಬಿಜೆಪಿ ಹಲಾಲ್, ಹಿಜಾಬ್ ನಿಂದ ಕಾಲಹರಣ : ಬಿಜೆಪಿಯವರು ಐದು ವರ್ಷದಲ್ಲಿ ಮಾಡಿದ್ದೇನು?. ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ಇದರಲ್ಲೇ ಕಾಲ ಕಳೆದರು. ಹಾಗಾಗಿ ಜನ ತೀರ್ಪು ಕೊಟ್ಟು ವಿರೋಧ ಪಕ್ಷದಲ್ಲಿ ಅವರನ್ನು ಕೂರಿಸಿದ್ದಾರೆ. ಆಹಾರ, ಗೃಹ, ಶಕ್ತಿ ಯೋಜನೆ ಕೊಟ್ಟು ನಾವು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.
ನಾವು ಬರುವ ಮುನ್ನವೇ ನಾಲ್ಕು ಸಾವಿರ ಬಸ್ ಗೆ ಆದೇಶ ಕೊಟ್ಟು ಹಿಂದಿನ ಸರ್ಕಾರದವರು ಹೋಗಿದ್ದಾರೆ. ಈ ವರ್ಷ ಆ ಬಸ್ ಗಳು ಬರುತ್ತವೆ. 95% ನಾರ್ಮಲ್ ಹೊಸ ಬಸ್ ಗಳು, ಹಾಗೂ 5 % ಮಲ್ಟಿ ಎಕ್ಸ್ ಎಲ್ ಹಾಗೂ ಬೇರೆ ರೀತಿ ಬಸ್ ಗಳು ಬರಲಿವೆ. ಕಳೆದ ವರ್ಷ ನಾಲ್ಕು ಕಾರ್ಪೋರೆಷನ್ 4 ಸಾವಿರ ಕೋಟಿ ನಷ್ಟಲ್ಲಿದೆ ಎಂದ ಅವರು, ಮಠಮಾನ್ಯಗಳಿಗೆ ಬಿಜೆಪಿಗಿಂತ ನಾವು ಹೆಚ್ಚು ಅನುದಾನ ಕೊಟ್ಟಿದ್ದೇವೆ ಎಂದು ಹೇಳಿದರು.
ಒಂದು ದಿನಕ್ಕೆ 1 ಲಕ್ಷ 56 ಸಾವಿರ ಟ್ರಿಪ್ ಇರುತ್ತದೆ. ಅದರಲ್ಲಿ ಯಾವುದೋ ಒಂದು ಅವ್ಯವಸ್ಥೆ ಆದರೆ, ಎಲ್ಲ ಕಡೆ ಆಯ್ತು ಅಂತ ಅಲ್ಲ. ಆದರೂ ತಪ್ಪೆ. ಸಾರ್ವಜನಿಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳಲು ಸಿಬ್ಬಂದಿಗೆ ತಿಳಿಸಲಾಗಿದೆ . ಅದೇ ರೀತಿ ಸಾರ್ವಜನಿಕರೂ ಸಹ ಸಿಬ್ಬಂದಿ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಹೆಚ್ಚು ಓವರ್ ಲೋಡ್ ಆದ್ರು ಸಹ ಸಿಬ್ಬಂದಿಗಳಿಗೆ ತೊಂದರೆ ಆಗುತ್ತದೆ. ಸಿಬ್ಬಂದಿಗೆ ಒತ್ತಡ ಹಾಗೂ ಸಾರ್ವಜನಿಕರಿಗೂ ಸಹ ಒತ್ತಡ ಆಗುತ್ತದೆ. ವಾಹನಗಳಿಗೂ ಸಮಸ್ಯೆ ಆಗುತ್ತದೆ. ಹಾಗಾಗಿ ಈಗಾಗಲೇ ಆದೇಶ ಹೊರಡಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂಓದಿ:Karnataka Govt Jobs: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇಮಕಾತಿ.. ಇಲ್ಲಿದೆ ಸಂಪೂರ್ಣ ಮಾಹಿತಿ