ಬೆಂಗಳೂರು: ನಗರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ಹಾಕುವ ಪ್ರಮಾಣ ಹಾಗೂ ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿರುವ ಹಾಸಿಗೆ ಸಾಮರ್ಥ್ಯ ಹೆಚ್ಚಳ ಮಾಡುವಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನಿರ್ದೇಶನ ನೀಡಿದ್ದಾರೆ.
ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರ ಹೆಚ್ಚು ಹೆಚ್ಚು ವ್ಯಾಕ್ಸಿನ್ ಹಾಕುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಯುಕ್ತರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ನೀಡಲು 3 ಸೆಷನ್ ಸೈಟ್‌ಗಳಿದ್ದು, ಪ್ರತಿನಿತ್ಯ 100 ರಿಂದ 120 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಈ ಪೈಕಿ ಪ್ರತಿನಿತ್ಯ ಸಾವಿರಾರು ಮಂದಿ ಹೊರ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಅವರಲ್ಲಿ ಲಸಿಕೆ ಪಡೆಯಲು ಅರ್ಹರಿರುವವರಿಗೆ ಲಸಿಕೆ ಪಡೆಯುವ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ಸೂಕ್ತ ಕ್ರಮವಹಿಸಲು ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿಯೇ ಮೀಸಲಿಡಲಾಗಿತ್ತು. ಇದೀಗ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 150 ಹಾಸಿಗೆಗಳನ್ನು ಮೀಸಲಿರಿಸಿದ್ದು, ಅನ್ಯ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಉಳಿದ ಹಾಸಿಗೆಗಳನ್ನು ಬಳಸಲಾಗುತ್ತಿದೆ. ಸದ್ಯ ಕೋವಿಡ್ಗಾಗಿ ಮೀಸಲಿರಿಸಿರುವ ಎಲ್ಲಾ ಹಾಸಿಗೆಗಳು ಭರ್ತಿಯಾಗಿದ್ದು, ಕೋವಿಡ್ ಸೋಂಕಿತರ ಚಿಕತ್ಸೆಗಾಗಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಪಶ್ಚಿಮ ವಲಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.