ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇಂದು ನಗರದ ಸಮಸ್ಯೆಗಳ ಕುರಿತು ಗಹನವಾದ ಚರ್ಚೆ ನಡೆಯಿತು. ಬಿಡಿಎ, ಜಲಮಂಡಳಿ, ಬೆಸ್ಕಾಂ ಹಾಗೂ ಸಂಚಾರಿ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ವಿವಿಧ ಸಮಸ್ಯೆಗಳನ್ನ ಅಧಿಕಾರಿಗಳ ಗಮನಕ್ಕೆ ತಂದು ಚರ್ಚೆ ನಡೆಸಲಾಯಿತು.
ಈ ವೇಳೆ, ಸಾಕಷ್ಟು ಪಾಲಿಕೆ ಸದಸ್ಯರು ನಗರದ ಹಲವು ರಸ್ತೆಗಳಲ್ಲಿ ಕೆಟ್ಟು ಹೋದ ವಾಹನಗಳು ಹಾಗೂ ಸ್ಕ್ರ್ಯಾಪ್ ವಾಹನಗಳನ್ನು ಪಾರ್ಕ್ ಮಾಡೋದ್ರಿಂದ ಅಲ್ಲಲ್ಲಿ ಕಸದ ರಾಶಿ ಬೀಳುತ್ತಿವೆ. ಬ್ಲಾಕ್ ಸ್ಪಾಟ್ ಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು. ಇದನ್ನು ಸಂಚಾರಿ ಪೊಲೀಸರು ತೆರವು ಮಾಡಬೇಕು, ಆದ್ರೆ ಮಾಡುತ್ತಿಲ್ಲ, ಪ್ರಮುಖ ರಸ್ತೆಗಳೇ ಟ್ರಾಫಿಕ್ ಜಾಂ ನಿಂದ ನಲುಗುತ್ತಿವೆ ಎಂದರು. ಇನ್ನು ಎಲ್ಲ ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ಆದ್ರೆ ಬೌನ್ಸ್ ಸ್ಕೂಟರ್ ಗಳನ್ನು ಅಲ್ಲಲ್ಲಿ ಪಾರ್ಕ್ ಮಾಡೋದ್ರಿಂದ ಸಾಕಷ್ಟು ತೊಂದರೆಯಾಗ್ತಿದೆ. ಮೆಟ್ರೋ ನಿಲ್ದಾಣದ ಕಡೆ ಮನೆಗಳ ಮುಂದೆಯೇ ವಾಹನ ನಿಲ್ಲಿಸಲಾಗ್ತಿದೆ ಎಂದು ಪಾಲಿಕೆ ಸದಸ್ಯರು ಆರೋಪಿಸಿದರು.
ಪಾಲಿಕೆ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಂಚಾರಿ ವಿಭಾಗದ ಎಸಿಪಿ ರಂಗಸ್ವಾಮಿ, ನಗರದಲ್ಲಿ ಪೊಲೀಸರ ಸಂಖ್ಯೆ ತುಂಬಾ ಕಡಿಮೆ ಇದೆ. ಎಎಸ್ಐ ಗಳಿಗೆ ಪ್ರತಿದಿನ ಹೆಚ್ಚು ಕೆಲಸಗಳಾಗುತ್ತಿದೆ. ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮಾದರಿ ಪೊಲೀಸ್ ಪ್ರತಿಮೆ ಅಳವಡಿಸಲಾಗಿದೆ. ನಿಯಮ ಪಾಲನೆ ಮಾಡಬೇಕಾದ ಪೊಲೀಸ್ ಸಿಬ್ಬಂದಿ ಮ್ಯಾನೇಜ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬೌನ್ಸ್ ಬೈಕ್ ವಿರುದ್ಧ ಸರ್ವೆ ಮಾಡಲಾಗಿದೆ. ಎಲ್ಲೆಂದರಲ್ಲಿ ನಿಲ್ಲಿಸಿದ ಬೈಕ್ ಗಳನ್ನ ಟೋಯಿಂಗ್ ಮಾಡಲಾಗಿದೆ. ಪ್ರತಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗೆ 2 ಟೊಯಿಂಗ್ ವಾಹನ ನೀಡಲಾಗಿದೆ. ಟೋಯಿಂಗ್ ಮಾಡಿದ ಬೈಕ್ ಗಳ ರಿಜಿಸ್ಟರ್ ಮಾಡಲಾಗುತ್ತಿದೆ. ಟೋಯಿಂಗ್ ಮಾಡಿದ ಬೈಕ್ ಗಳು ದಂಡ ಕಟ್ಟಿ ವಾಪಸ್ ಪಡಯುತ್ತಿವೆ ಎಂದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್, ಸಾಕಷ್ಟು ಪಾಲಿಕೆ ಸದಸ್ಯರು ಈ ಬಗ್ಗೆ ನೋವನ್ನು ವ್ಯಕ್ತಪಡಿಸಿದ್ದಾರೆ. ಮೆಟ್ರೋ ಇರೋ ಕಡೆ, ರಸ್ತೆಗಳಲ್ಲಿ ಅಲ್ಲಲ್ಲಿ ಬೌನ್ಸ್ ಗಾಡಿಗಳನ್ನು ನಿಲ್ಲಿಸ್ತಾರೆ. ಈ ಬಗ್ಗೆ ಬೌನ್ಸ್ ಸಂಸ್ಥೆ ಜೊತೆ ಟ್ರಾಫಿಕ್ ಪೊಲೀಸರು ಮಾತನಾಡಿ, ಪಾರ್ಕಿಂಗ್ ಸಿಸ್ಟಂ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೇ ಬೇರೆ ಹಳೇ ವಾಹನ, ಸ್ಕ್ಯ್ರಾಪ್ ವಾಹನಗಳನ್ನು ರಸ್ತೆ ಬದಿಯಿಂದ ತೆರವು ಮಾಡುವಂತೆ, ನಾನು ಮತ್ತು ಆಯುಕ್ತರು ಪತ್ರ ಬರೆಯುತ್ತೇವೆ ಎಂದರು.