ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಜಲಮಂಡಳಿ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದು, ರಸ್ತೆಗಳ ದುರಸ್ತಿಗೆ ತುರ್ತಾಗಿ 300 ಕೋಟಿ ಬಿಡುಗಡೆ ಮಾಡುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.
ಜಲಮಂಡಳಿಯ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳಿಗೆ ರಸ್ತೆ ಅಗೆದು ಒಂದು ವರ್ಷದ ಮೇಲಾಗಿದೆ. ಇಲ್ಲಿಯವರೆಗೆ ಅಗೆದ ರಸ್ತೆಗಳನ್ನು ಮುಚ್ಚಿಲ್ಲ . ಹೀಗಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ನಿರಂತರವಾಗಿ ದೂರುಗಳು ಕೇಳಿ ಬರುತ್ತಿವೆ. ಅಗೆದ ರಸ್ತೆಗಳನ್ನು ಒಂದು ವರ್ಷ ಮೇಲಾದರೂ ಮುಚ್ಚದೆ ಇರುವುದರಿಂದ ಸ್ಥಳೀಯರಿಗೂ ಸಮಸ್ಯೆ ಉಂಟಾಗಿದೆ. ಮಳೆಗಾಲದ ಸಂದರ್ಭದಲ್ಲಿ ಕೂಡ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 110 ಹಳ್ಳಿಗಳಲ್ಲಿ ದುರಸ್ತಿ ಕಾರ್ಯಕ್ಕೆ 2020-21ನೇ ಸಾಲಿನ ಬಜೆಟ್‌ನಲ್ಲಿನ ಕ್ರಿಯಾಯೋಜನೆಗೆ ಅನುಮೋದನೆ ನೀಡಬೇಕು ಎಂದು ಪತ್ರ ಮುಕೇನ ಮನವಿ ಮಾಡಿದ್ದಾರೆ.
ದುರಸ್ತಿ ಕಾಮಗಾರಿಗೆ ಸರ್ಕಾರವು ಈಗಾಗಲೇ ಒಂದು ಸಾವಿರ ಕೋಟಿ. ಅನುದಾನ ಮೀಸಲಿಟ್ಟಿರುವುದರಿಂದ ಪಾಲಿಕೆ ವ್ಯಾಾಪ್ತಿಗೆ ಬರುವ ದಾಸರಹಳ್ಳಿ ಯಲಹಂಕ, ಮಹದೇವಪುರ, ರಾಜರಾಜೇಶ್ವರಿ ನಗರ ಹಾಗೂ ಬೊಮ್ಮನಹಳ್ಳಿ ವಲಯವಾರು ರಸ್ತೆ ದುರಸ್ತಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿಲಾಗಿದ್ದು, ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.