ಬೆಂಗಳೂರು : ಹಿಂದಿನ ಕೌನ್ಸಿಲ್ ಅವಧಿಯಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದ ಪಾಲಿಕೆ ಆಸ್ತಿಗಳನ್ನು ಋಣಮುಕ್ತಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.
ಬಿಬಿಎಂಪಿ ಒಡೆತನದ 11 ಆಸ್ತಿಗಳ ಪೈಕಿ ಈಗಾಗಲೇ 6 ಆಸ್ತಿಗಳು ಋಣಮುಕ್ತವಾಗಿವೆ. ಅಡಮಾನವಿಟ್ಟ 5 ಆಸ್ತಿಗಳಲ್ಲಿ 4 ಆಸ್ತಿಗಳನ್ನು ಋಣ ಮುಕ್ತಗೊಳಿಸಲು ಪಾಲಿಕೆ ತಯಾರಿ ನಡೆಸಿದೆ. ಪಿಯುಬಿ ಕಟ್ಟಡ, ಕೆ. ಆರ್. ಮಾರುಕಟ್ಟೆ, ಬಿಬಿಎಂಪಿಯ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ ಮತ್ತು ಕಲಾಸಿ ಪಾಳ್ಯ ಮಾರುಕಟ್ಟೆ ಕಟ್ಟಡಗಳನ್ನು ಬ್ಯಾಂಕ್ಗಳಿಗೆ ಅಡಮಾನಕ್ಕೆ ಇಡಲಾಗಿದೆ.
ಇದರಲ್ಲಿನ ನಾಲ್ಕು ಕಟ್ಟಡಗಳನ್ನು 2016-17ರಲ್ಲಿ ಹುಡ್ಕೋ ಸಂಸ್ಥೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್ಬಿಐ) 871 ಕೋಟಿ ರೂ.ಗೆ ಅಡಮಾನ ಮುಂದುವರೆಸಿ ಕಡಿಮೆ ಬಡ್ಡಿ ದರಕ್ಕೆ ವರ್ಗಾಹಿಸಲಾಗಿತ್ತು. ಇದೀಗ ಎಸ್ಬಿಐಗೆ 871 ಕೋಟಿ ರೂ. ಸಂದಾಯ ಮಾಡಿ, ಅಡಮಾನವಿಟ್ಟ ಕಟ್ಟಡಗಳನ್ನು ಋಣಮುಕ್ತಗೊಳಿಸಲು ಬಿಬಿಎಂಪಿ ಮುಂದಾಗಿದೆ.
'ಕೆ. ಆರ್. ಮಾರುಕಟ್ಟೆ ಕಟ್ಟಡ ಹೊರತುಪಡಿಸಿ ಪಿಯುಬಿ, ಬಿಬಿಎಂಪಿಯ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ ಮತ್ತು ಕಲಾಸಿ ಪಾಳ್ಯ ಮಾರುಕಟ್ಟೆಯ ಕಟ್ಟಡಗಳು ಋಣಮುಕ್ತಗೊಳ್ಳಲಿವೆ ಎಂದು ಮೇಯರ್ ಗಂಗಾಂಬಿಕೆ ಭರವಸೆ ನೀಡಿದ್ದಾರೆ.