ಬೆಂಗಳೂರು: ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳ ಟ್ರೇಡ್ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಹಲವು ಮಳಿಗೆಗಳ ಮೇಲೆ ರೈಡ್ ಮಾಡಿ, ಫೈನ್ ಹಾಕಿದ್ದೇವೆ. ಈಗ ಗ್ರೇಡ್ ಲೈಸೆನ್ಸ್ ಮಾಡಿ ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೇವೆ. ನಂತರ ಒಂದು ಕಾರ್ಖಾನೆಯಲ್ಲಿ ಅಥವಾ ಅಂಗಡಿಯಲ್ಲಿ ಕೇವಲ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳಿದ್ದರೆ ಅಲ್ಲಿಗೆ ನಾವು ಗ್ರೇಡ್ ಲೈಸೆನ್ಸ್ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸದ್ಯದಲ್ಲೇ ಕ್ರಮ: ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ಜಪ್ತಿ ಮಾಡಿ ನಂತರ ಆ ಅಂಗಡಿಯನ್ನು ಕ್ಲೋಸ್ ಮಾಡುತ್ತೇವೆ. ಈ ವಿಚಾರವನ್ನು ಅಧಿಕಾರಿಗಳಿಗೂ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಪ್ರತಿ ಝೋನಲ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಇಲ್ಲದಿದ್ದರೆ ಅಂಗಡಿಗಳ ಮೇಲೆ ನಾವು ರೈಡ್ ಮಾಡುವುದು, ಅವರು ಫೈನ್ ಕಟ್ಟಿ ನಾವು ಪುನಃ ಓಪನ್ ಮಾಡುವುದು ಆಗುತ್ತದೆ. ಹೀಗಾಗಿ, ನಾವು ಸದ್ಯದಲ್ಲೇ ಕ್ರಮಕೈಗೊಳ್ಳಲಿದ್ದೇವೆ ಎಂದರು.
ಗಣೇಶ ವಿಗ್ರಹ ಪ್ರತಿಷ್ಟಾಪನೆ ವಿಚಾರ: ಈ ಬಾರಿಯ ಗಣೇಶ ಉತ್ಸವದಲ್ಲಿ ಸರಿಯಾದ ರೀತಿಯಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಯಾಗಬೇಕು ಹಾಗೂ ನಿಮಜ್ಜನವಾಗಬೇಕು ಎಂಬುದು ಪ್ರಮುಖ ವಿಚಾರವಾಗಿದೆ. ಈಗಾಗಲೇ ನಾವು ಯಾವುದರ ಅರ್ಜಿಯನ್ನು ಪಡೆಯಬೇಕು, ಯಾವುದರದ್ದು ಮುಚ್ಚಳಿಕೆ ಪಡೆಯಬೇಕು ಎಂಬುದರ ಕುರಿತು ಅರ್ಜಿ ತಯಾರಿಸಿ ಹಂಚಿಬಿಟ್ಟಿದ್ದೇವೆ. ಈ ಹಿಂದೆ 63 ಸಬ್ಡಿವಿಷನ್ಗಳಲ್ಲಿ ಯಾವ ಯಾವ ಅಧಿಕಾರಿಗಳಿರುತ್ತಿದ್ದರು ಗೊತ್ತಾಗುತ್ತಿರಲಿಲ್ಲ. ಈಗ ಎಲ್ಲಾ ಸಬ್ ಡಿವಿಷನ್ಗಳಲ್ಲಿ ಎಇಇ ನೋಡಲ್ ಅಧಿಕಾರಿಗಳಾಗಿ ಮೆಸ್ಕಾಂ, ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳ ನೇಮಕ ಕೂಡಾ ಮಾಡಿ ಅವರಿಗೆ ಫಾರ್ಮಾಟ್ಗಳನ್ನು ಹಂಚಿಕೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಗುಂಡಿ ಮುಚ್ಚಲು 25ರಿಂದ 30 ಕೋಟಿ ರೂ ಮೀಸಲು: ರಸ್ತೆ ಗುಂಡಿ ಮುಚ್ಚುವ ಸಂಬಂಧ ಬಿಬಿಎಂಪಿ ವಾರ್ಷಿಕವಾಗಿ 25ರಿಂದ 30 ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರಂತೆ ತ್ವರಿತವಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಮಳೆಗಾಲ ಇಲ್ಲದಿದ್ದರೆ ಈ ವಾರದೊಳಗೆ ಬಹುತೇಕ ಗುಂಡಿಗಳನ್ನು ಮುಚ್ಚಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಗಣೇಶ ಪ್ರತಿಷ್ಠಾಪನೆ: ತ್ವರಿತ ಅನುಮತಿಗೆ ಬಿಬಿಎಂಪಿ ಆಯುಕ್ತರಿಂದ ಸೂಚನೆ