ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣವನ್ನು "ಜೀರೋ ವೇಸ್ಟ್ ಕ್ಯಾಂಪಸ್" ಮಾಡುವ ಯೋಜನೆಗೆ ಮೇಯರ್ ಗಂಗಾಂಬಿಕೆ ಇಂದು ಚಾಲನೆ ನೀಡಿದರು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಉತ್ಪತ್ತಿ ಆಗುವ ಕಸವನ್ನು ಆವರಣದಲ್ಲೇ ಸಂಸ್ಕರಿಸಿ "ಜೀರೋ ವೇಸ್ಟ್ ಕ್ಯಾಂಪಸ್" ಮಾಡಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಮೇಯರ್ ಈ ಸಂದರ್ಭದಲ್ಲಿ ತಿಳಿಸಿದರು. ಕೇಂದ್ರ ಕಚೇರಿ ಆವರಣದಲ್ಲಿ ಉತ್ಪತ್ತಿ ಆಗುವ ಹಸಿ ಕಸವನ್ನು ಆವರಣದಲ್ಲೇ ಸಂಸ್ಕರಣೆ ಮಾಡಲಾಗುವುದು. ಬಿಬಿಎಂಪಿ ಕೇಂದ್ರ ಕಚೇರಿ, ಕೌನ್ಸಿಲ್ ಕಟ್ಟಡ ಸೇರಿ ನಾಲ್ಕು ಕಟ್ಟಡಗಳು, ಉದ್ಯಾನವನ, ಕ್ಯಾಂಟೀನ್ ಹಾಗೂ ರಸ್ತೆಯಿಂದ ನಿತ್ಯ 50 ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಲು 70 ಕೆಜಿ ಸಾಮರ್ಥ್ಯದ ಎರಡು ಕಾಂಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ದೇವಸ್ಥಾನದಲ್ಲಿ ಸಂಗ್ರಹವಾಗುವ ಹೂವನ್ನು ಅಲ್ಲೇ ಸಂಸ್ಕರಿಸಲು ಒಂದು ಕಾಂಪೋಸ್ಟರ್‌ನ ಅಳವಡಿಸಲಾಗಿದೆ. ಮರದ ಎಲೆ ಸಂಸ್ಕರಿಸಲು ಎರಡು ಕಾಂಪೋಸ್ಟರ್‌ಗಳನ್ನು ಅಳವಡಿಸಲಾಗಿದ್ದು, ಕಚೇರಿ ಆವರಣದಲ್ಲಿ ಸಂಗ್ರಹವಾಗುವ ಒಣ ಕಸವನ್ನು ಚಿಂದಿ ಆಯುವವರು ವಾರಕ್ಕೊಮ್ಮೆ ಒಣ ಕಸ ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯಲ್ಲಿದ್ದಾರೆ ಎಂದರು.
ಪಾಲಿಕೆ ಆವರಣದಲ್ಲಿ 134 ವಿಭಾಗೀಯ ಕಚೇರಿಗಳಿದ್ದು, ಎಲ್ಲಾ ಕಚೇರಿಗಳಿಗೂ ಹಸಿ ತ್ಯಾಜ್ಯ ಸಂಗ್ರಹಕ್ಕೆ ಹಸಿರು ಬಣ್ಣದ ಡಬ್ಬಿ, ಒಣ ಕಸ ಸಂಗ್ರಹಕ್ಕೆ ನೀಲಿ ಬಣ್ಣದ ಡಬ್ಬಿಗಳನ್ನು ವಿತರಿಸಲಾಗುವುದು. ಜೊತೆಗೆ ಎಲ್ಲಾ ಶೌಚಾಲಯಗಳಲ್ಲೂ ಸ್ಯಾನಿಟರಿ ಕಸ ಸಂಗ್ರಹಕ್ಕೆ ಕೆಂಪು ಬಣ್ಣದ ಡಬ್ಬಿ ಇಡಲಾಗುವುದು. ಆ ಬಳಿಕ ಎಲ್ಲ ಕಚೇರಿಗಳಲ್ಲೂ ಕಸವನ್ನು ಕಡ್ಡಾಯವಾಗಿ ವಿಂಗಡಿಸಿಯೇ ಕೊಡಬೇಕು ಎಂದರು.
ಪಾಲಿಕೆ ಆಯುಕ್ತರು ಮಾತನಾಡಿ, ಪಾಲಿಕೆ ಆವರಣದಲ್ಲಿ "ಜೀರೋ ವೇಸ್ಟ್ ಕ್ಯಾಂಪಸ್" ಅಳವಡಿಸಿ ಎಲ್ಲರಿಗೂ ಮಾದರಿಯಾಗಿ, ಆ ಬಳಿಕ ಎಲ್ಲಾ ಕಚೇರಿಗಳಲ್ಲೂ ಜೀರೋ ವೇಸ್ಟ್ ಕ್ಯಾಂಪಸ್ ಅಳವಡಿಸಲು ಸೂಚನೆ ನೀಡಲಾಗುವುದು. ಕಚೇರಿಗಳಲ್ಲಿ ಮಾತ್ರವಲ್ಲದೇ ಮನೆ ಮನೆಗಳಲ್ಲೂ ಕಸ ಸಂಸ್ಕರಣೆ ಮಾಡಿದರೆ ನಗರದಲ್ಲಿ ಕಸದ ಸಮಸ್ಯೆ ನಿವಾರಣೆಯಾಗಲು ಸಾಧ್ಯ ಎಂದರು.