ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಈ ಬಾರಿ ಸಾಮೂಹಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವುದಕ್ಕೆ ಅನುಮತಿ ನೀಡದಂತೆ ಚರ್ಚೆ ಮಾಡಿರುವುದಾಗಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಎಲ್ಲಾ ಧಾರ್ಮಿಕ ಹಬ್ಬಗಳನ್ನು ಸರಳವಾಗಿ ಆಚರಿಸುವಂತೆ ಈಗಾಗಲೇ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಅಲ್ಲದೆ ನಗರದಲ್ಲಿ ಕಂಟೈನ್ಮೆಂಟ್ ಝೋನ್ಗಳು ಕೂಡ ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಜನರು ಗುಂಪು ಸೇರಿದರೆ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅದ್ದರಿಂದ ಆಗಸ್ಟ್ 21 ಮತ್ತು 22ರಂದು ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಸೂಕ್ತವಲ್ಲ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಹೇಳಿದ್ದಾರೆ.
ಬಿಬಿಎಂಪಿ ಸಾಮೂಹಿಕ ಗಣೇಶೋತ್ಸವ್ಕೆ ಅನುಮತಿ ನೀಡುವುದು ಅನುಮಾನ ಎಂಬುದನ್ನರಿತ ಗಣೇಶ ಮೂರ್ತಿ ವ್ಯಾಪರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೌರಿ-ಗಣೇಶ ಮೂರ್ತಿಗಳ ವ್ಯಾಪಾರವನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳಿಗೆ ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ.
ಈಗಾಗಲೇ ಹಲವು ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ಕಲಾವಿದರಿಂದ ಖರೀದಿಸಿ ಮಾರಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಇದೀಗ ಬಿಬಿಎಂಪಿ ನಿರ್ಧಾರದಿಂದ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.