ಬೆಂಗಳೂರು: ಗುಜರಾತ್ ರಾಜ್ಯದ ಮಾದರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವಿಶ್ವವಿದ್ಯಾಲಯ ಆರಂಭಿಸಬೇಕು ಮತ್ತು ಕರಾವಳಿ ಪೊಲೀಸ್ ಪಡೆಗೆ ಸ್ಪೀಡ್‌ಬೋಟ್‌ಗಳನ್ನು ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದರು.
ರಾಜ್ಯದಲ್ಲಿನ ವಿಧಿವಿಜ್ಞಾನ ಪ್ರಯೋಗಾಲಯವನ್ನು ಮತ್ತಷ್ಟು ಆಧುನೀಕರಣಗೊಳಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಲು ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಫ್‌ಎಸ್‌ಎಲ್ ವಿಶ್ವವಿದ್ಯಾಲಯ ಆರಂಭಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಮಾದರಿಯಲ್ಲಿ ಎಫ್‌ಎಸ್‌ಎಲ್ ವಿಶ್ವವಿದ್ಯಾಲಯ ಪ್ರಾರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಕೇಂದ್ರಕ್ಕೆ ಮನವಿ ಮಾಡಲಾಗುವುದು. ವಿಶ್ವವಿದ್ಯಾಲಯ ಆರಂಭಕ್ಕೆ ಅನುಮತಿ ನೀಡಬೇಕು. ಅಲ್ಲದೇ, ಕರಾವಳಿ ಭಾಗದಲ್ಲಿಯೂ ಹೆಚ್ಚಿನ ಭದ್ರತೆ ಕೈಗೊಳ್ಳಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಗಮವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮ ಪೊಲೀಸ್ ಇಲಾಖೆ ಸೂಕ್ತವಾಗಿದೆ. ಪೊಲೀಸ್ ಇಲಾಖೆಯಲ್ಲಿ ಹಿಂದೆ 22% ಹುದ್ದೆಗಳು ಖಾಲಿ ಇದ್ದವು. ಈಗ ನಾವು ಖಾಲಿ ಹುದ್ದೆಗಳ ಪ್ರಮಾಣ 11% ಕ್ಕೆ ಇಳಿಸಿದ್ದೇವೆ. ಮಾರ್ಚ್ ವರೆಗೆ 6% ಪ್ರಮಾಣಕ್ಕೆ ಇಳಿಸಲಿದ್ದೇವೆ. ಅಪರಾಧ ಚಟುವಟಿಕೆಗಳ ನಿಗ್ರಹ ಯಶಸ್ವಿಯಾಗಿ ಮಾಡ್ತಿದ್ದೇವೆ. ಡ್ರಗ್ ಜಾಲ ಭೇದಿಸುವಲ್ಲಿ ಮುನ್ನಡೆ ಸಾಧಿಸಿದ್ದೇವೆ. ವಿದೇಶಿ ಲಿಂಕ್ ಗಳನ್ನು ಭೇದಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಶಾಂತವಾಗಿದೆ. ಆದ್ರೆ, ಮಂಗಳೂರು ಮತ್ತು ಬೆಂಗಳೂರಿನ ಡಿ. ಜೆ. ಹಳ್ಳಿಯಲ್ಲಿ ಎರಡು ಘಟನೆಗಳು ಮಾತ್ರ ನಡೆದವು. ಅವುಗಳನ್ನ ಕೆಲವೇ ಗಂಟೆಗಳಲ್ಲಿ ರಾಜ್ಯ ಪೊಲೀಸರು ನಿಭಾಯಿಸಿದರು. ಕಳೆದ 10 ವರ್ಷಗಳಲ್ಲಿ ಆಗದಿರೋದನ್ನ ನಾವು 10 ತಿಂಗಳಲ್ಲೇ ಮಾಡಿದ್ದೇವೆ. ಕೇವಲ ಗಾಂಜಾ ಮಾತ್ರವಲ್ಲ ಸಿಂಥೆಟಿಕ್ ಡ್ರಗ್ಸ್ ಸಹ ನಾವು ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಪೊಲೀಸರ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದರು.
ಸೈಬರ್ ಕ್ರೈಂನ್ನು ಸಹ ರಾಜ್ಯದಲ್ಲಿ ನಿಯಂತ್ರಣಕ್ಕೆ ತಂದಿದ್ದೇವೆ. ಟೆರರಿಸ್ಟ್ ಮತ್ತು ಸ್ಲೀಪರ್ಸೆಲ್ಗಳನ್ನ ಪತ್ತೆ ಹಚ್ಚಲು ರಾಜ್ಯ ಪೊಲೀಸರು ಸಾಕಷ್ಟು ಶ್ರಮ ಪಡ್ತಿದ್ದಾರೆ ಎಂದು ತಿಳಿಸಿದರು.
ಪೊಲೀಸರು ಮತ್ತಷ್ಟು ಚುರುಕಾಗಿ ಕಾರ್ಯ ನಿರ್ವಹಿಸಲು ಕರವಾಳಿ ಪೊಲೀಸ್ ಪಡೆಗೆ 90 ಟನ್ ಸಾಮರ್ಥ್ಯದ ಸ್ಪೀಡ್ ಬೋಟ್‌ಗಳನ್ನು ನೀಡಬೇಕು ಎಂದು ಮನವಿ ಮಾಡಿದ ಅವರು, ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು ಶೇ.23ರಷ್ಟು ಪ್ರಮಾಣದಲ್ಲಿ ಖಾಲಿ ಇತ್ತು. ಅದನ್ನು ಶೇ.11ಕ್ಕೆ ಇಳಿಕೆ ಮಾಡಲಾಯಿತು. ಇದೀಗ ಶೇ.9ಕ್ಕೆ ಇಳಿಕೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಖಾಲಿ ಇರುವ ಹುದ್ದೆಗಳ ಶೇಕಡವಾರು ಪ್ರಮಾಣವನ್ನು ಇನ್ನಷ್ಟು ಕಡಿಮೆಗೊಳಿಸಲಾಗುವುದು ಎಂದು ಹೇಳಿದರು.