ಬೆಂಗಳೂರು: ಮೈಸೂರು ಮಹಾರಾಜರ ಕಾಲದಿಂದ ಪ್ರಾರಂಭಗೊಂಡು 113 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ತನ್ನದೇ ಆದ ಘನತೆ, ಗೌರವ ಹಾಗೂ ಪರಂಪರೆ ಉಳಿಸಿಕೊಂಡಿರುವ ಸದನ ನಮ್ಮ ಕರ್ನಾಟಕ ವಿಧಾನ ಪರಿಷತ್ತು. ಭಾರತ ದೇಶದಲ್ಲಿಯೇ ಅತ್ಯಂತ ಉತ್ತಮವಾದ ಸದನವೆಂಬ ಹೆಗ್ಗಳಿಕೆ ನಮ್ಮ ಕರ್ನಾಟಕ ವಿಧಾನ ಪರಿಷತ್ಗೆ ಇದೆ ಎಂದು ವಿಧಾನ ಪರಿಷತ್ನ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹೊರಟ್ಟಿ ಕ್ಷಮೆ
ಚಿಂತಕರ ಚಾವಡಿ, ಹಿರಿಯರ ಮನೆ ಎಂದು ಕರೆಯುವ ವಿಧಾನ ಪರಿಷತ್ನಲ್ಲಿ ನಿನ್ನೆ ನಡೆದ ಗದ್ದಲ ಹಾಗೂ ಬಡಿದಾಟ ನಾಡಿಗೆ ಒಳ್ಳೆಯ ಸಂದೇಶ ಕೊಡುವಂತಹ ವಿಧಾನ ಪರಿಷತ್ಗೆ ಒಂದು ಕಪ್ಪು ಚುಕ್ಕೆ ಎಂದರೆ ತಪ್ಪಾಗಲಾರದು. ಇದನ್ನು ರಾಜ್ಯದ ಜನತೆ ಅಷ್ಟೆ ಅಲ್ಲದೆ ಬೇರೆ ಬೇರೆ ದೇಶದ ಜನರೂ ವೀಕ್ಷಿಸಿದ್ದಾರೆ. ಇದರಿಂದ ನಮ್ಮ ವಿಧಾನ ಪರಿಷತ್ನ ಘನತೆ, ಗೌರವ ಕಡಿಮೆಯಾಗಿದೆ ಅನ್ನುವುದು ಇಡೀ ರಾಜ್ಯದ ಜನರ ಅನಿಸಿಕೆ ಎಂದಿದ್ದಾರೆ.
ಓದಿ: ಪ್ರಭಾವಿಗಳಿಗೇ ಯಾಮಾರಿಸಿ ಕೋಟಿ ಕೋಟಿ ಪೀಕಿದ ಯುವರಾಜ.. ರೇಡ್ ಮಾಡಿದ ಸಿಸಿಬಿ ಅಧಿಕಾರಿಗಳಿಗೇ ಶಾಕ್!
ಮಾಧ್ಯಮಗಳಲ್ಲಿ ಬರುವಂತಹ ವಿಚಾರಗಳನ್ನು ನೋಡಿದರೆ ರಾಜ್ಯದ ಜನತೆ ನಮ್ಮನ್ನು ಎಂದೂ ಕ್ಷಮಿಸಲಾರರೆಂಬ ಭಾವನೆ ಬರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ನಮ್ಮ ಮೇಲೆ ಇಟ್ಟ ಭರವಸೆ, ನಂಬಿಕೆಯನ್ನೇ ಇನ್ನು ಮುಂದೆ ಕಳೆದುಕೊಳ್ಳದಂತೆ ನಮ್ಮ ಅನೇಕ ವಿಧಾನ ಪರಿಷತ್ ಸದಸ್ಯರು ಈ ಘಟನೆಯಿಂದ ನೊಂದಿದ್ದೇವೆ. ಇನ್ನು ಮುಂದೆ ಈ ಸದನದ ಗೌರವಕ್ಕೆ ಧಕ್ಕೆ ಬರದಂತೆ ನಾವೆಲ್ಲರೂ ಪ್ರಯತ್ನ ಪಡುತ್ತೇವೆಂದು ಈ ಮೂಲಕ ನಾನು ಮನವಿ ಮಾಡುತ್ತೇನೆ ಎಂದರು.
ಈ ಸದನದಲ್ಲಿ ಸತತವಾಗಿ 7 ಬಾರಿ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಕಳೆದ 41 ವರ್ಷದಿಂದ ನಾನು ಎಲ್ಲಾ ರೀತಿಯಿಂದ ಸಚಿವನಾಗಿ, ಸಭಾಪತಿಯಾಗಿ ಸದನದಲ್ಲಿ ಘನತೆ, ಗೌರವ ಇಟ್ಟುಕೊಂಡು ಬಂದಿರುವೆ. ಬಹಳಷ್ಟು ಸದಸ್ಯರು ಇದೇ ರೀತಿ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ನಿನ್ನೆಯ ಘಟನೆಯ ಬಗ್ಗೆ ಇಡೀ ಸದನದ ಪರವಾಗಿ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳುತ್ತಾ ದಯಮಾಡಿ ನಿನ್ನೆಯ ಘಟನೆಯನ್ನು ಕ್ಷಮಿಸಬೇಕೆಂದು ಹೇಳಿಕೆಯಲ್ಲಿ ಕೋರಿದ್ದಾರೆ.