ಬೆಂಗಳೂರು/ಬೆಳಗಾವಿ: ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಹೊರಟ್ಟಿ ಅವರು ಮೂರನೇ ಸಲ ಸಭಾಪತಿ ಹುದ್ದೆ ಅಲಂಕರಿಸಿದರು.
ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಗಾಲದ ಅಧಿವೇಶನದ ಮೂರನೇ ದಿನವಾದ ಇಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಚುನಾವಣಾ ಪ್ರಕ್ರಿಯೆ ಕೈಗೆತ್ತಿಕೊಂಡರು. ಸಭಾಪತಿ ಸ್ಥಾನಕ್ಕೆ 4 ಪ್ರಸ್ತಾವ ಮಂಡಿಸಲಾಯಿತು.
ಸರ್ಕಾರಿ ಮುಖ್ಯ ಸಚೇತಕ ಡಾ.ವೈ.ಎ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಶಾಂತಾರಾಮ್ ಬುಡ್ನ ಸಿದ್ದ, ಅ.ದೇವೇಗೌಡ ಅವರು ಬಸವರಾಜ ಹೊರಟ್ಟಿ ಅವರನ್ನು ಪರಿಷತ್ತಿನ ಸಭಾಪತಿಯಾಗಿ ಚುನಾಯಿಸಬೇಕೆಂದು ಸೂಚಿಸಿದರು. ಇದನ್ನು ಬಿಜೆಪಿಯ ಹಿರಿಯ ಸದಸ್ಯರಾದ ಆಯನೂರು ಮಂಜುನಾಥ್, ಆರ್.ಶಂಕರ್, ಎಸ್.ವಿ ಸಂಕನೂರು, ಪ್ರದೀಪ್ ಶೆಟ್ಟರ್ ಅನುಮೋದಿಸಿದರು.
ಪ್ರತಿಪಕ್ಷಗಳಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯದ ಕಾರಣ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಪರವಿದ್ದ ನಾಲ್ಕೂ ಪ್ರಸ್ತಾವಗಳನ್ನು ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸದನದಲ್ಲಿ ಮಂಡಿಸಿದರು. ನಂತರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು.
ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ನೂತನ ಸಭಾಪತಿಯನ್ನು ಸಭಾಪತಿ ಪೀಠಕ್ಕೆ ಕರೆದೊಯ್ದರು. ಹಂಗಾಮಿ ಸಭಾಪತಿಗಳು ನೂತನ ಸಭಾಪತಿಗೆ ಹಸ್ತಲಾಘವ ಮಾಡಿ ಸಭಾಪತಿ ಪೀಠವನ್ನು ಹೊರಟ್ಟಿ ಅವರಿಗೆ ಬಿಟ್ಟುಕೊಟ್ಟರು.
ಹಂಗಾಮಿಯಾದ ಸಂತಸವಿದೆ: ಬಸವರಾಜ ಹೊರಟ್ಟಿ ಸಭಾಪತಿಯಾಗಿ ಆಯ್ಕೆ ಆಗುತ್ತಿರುವುದಕ್ಕೆ ಸಂತೋಷವಿದೆ. ಹೊರಟ್ಟಿ ಅವರು ದೇಶದಲ್ಲೇ ಎಂಟನೇ ಸಲ ಸಭಾಪತಿಯಾಗಿ ಆಯ್ಕೆ ಆಗುತ್ತಿರುವ ಪ್ರಥಮ ರಾಜಕಾರಣಿಯಾಗಿದ್ದಾರೆ. ಅನುಭವಸ್ಥರು ಸಭಾಪತಿ ಆಗುತ್ತಿರುವುದು ಸದನಕ್ಕೆ ಲಾಭ ಎಂದು ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅಭಿಪ್ರಾಯಪಟ್ಟರು.
ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ನನನಗೆ ಪಕ್ಷ ಉನ್ನತವಾದ ಹಂಗಾಮಿ ಸಭಾಪತಿ ಸ್ಥಾನ ನೀಡಿತ್ತು. ಇದು ನನ್ನ ಸೌಭಾಗ್ಯವೇ ಸರಿ. ಮುಂದೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ ಎಂದು ಹೇಳಿದರು.
ಓದಿ: ಪಾಕಿಸ್ತಾನ್ ಜಿಂದಾಬಾದ್ ಎಂದವರು ಕಾಂಗ್ರೆಸ್ನಲ್ಲಿದ್ದಾರೆ: ಸಚಿವ ನಾಗೇಶ್