ಬೆಂಗಳೂರು: ಲಾಕ್ಡೌನ್ ಒಂದರ ರೀತಿಯಲ್ಲೇ ಈ ಬಾರಿಯ ಬೆಂಗಳೂರು ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ ಮನೆಯಿಂದ ಅನಗತ್ಯವಾಗಿ ಹೊರಬಂದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಆರ್.ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಬಾರಿಯ ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಈ ಸಂಬಂಧ ಈಗಾಗಲೇ ಪೊಲೀಸರಿಗೆ ನಾನು ಹಾಗೂ ಸಿಎಂ ಇಬ್ಬರೂ ಸೂಚನೆ ನೀಡಿದ್ದೇವೆ. ಪ್ರಮುಖ ರಸ್ತೆಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದೇವೆ. ಈ ಬಾರಿ ಲಾಕ್ಡೌನ್ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಸೀಲ್ಡೌನ್ ಏರಿಯಾಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಅಲ್ಲಿಯೂ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್ಪಿಗಳಿಗೆ ಸೂಚನೆ ನೀಡಿದ್ದೇವೆ. ಅನಾವಶ್ಯಕವಾಗಿ ನಿಯಮ ಉಲ್ಲಂಘನೆ ಮಾಡಿದರೆ ಕೇಸ್ ದಾಖಲಿಸಲಾಗುತ್ತದೆ. ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸೂಚನೆ ನೀಡಿದ್ದೇನೆ, ಪೊಲೀಸ್ ಸಿಬ್ಬಂದಿ ಕೊರತೆ ಇರುವ ಕಡೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಬಾರಿಯ ಲಾಕ್ಡೌನ್ ಯಶಸ್ವಿ ಮಾಡುವುದೇ ನಮ್ಮ ಗುರಿ ಎಂದರು.
ಈಗ ರೂಪಿಸಿರುವ ಮಾರ್ಗಸೂಚಿಯಲ್ಲಿ ಮತ್ತೆ ಬದಲಾವಣೆ ಇಲ್ಲ. ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಸಂಚಾರ ನಿಯಂತ್ರಿಸುವುದು ಪೊಲೀಸರ ಮುಂದಿರುವ ಕೆಲಸ ಅದನ್ನು ಸಮರ್ಥವಾಗಿ ಮಾಡಲಿದ್ದಾರೆ. ಅನಗತ್ಯವಾಗಿ ಯಾರೇ ಮನೆ ಬಿಟ್ಟು ಹೊರಗೆ ಬಂದರೆ ಕೇಸ್ ಹಾಕಲಾಗುತ್ತದೆ ಎಂದರು.