ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಿಂದಲೂ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುವುದನ್ನು ಮುಂದುವರೆಸಿದ್ದು, ಅವರ ಮಾತುಗಳು ಸಂಪೂರ್ಣ ಸುಳ್ಳಿನ ಕಂತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, "ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕತೆ ಹಾಳು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಬೆಲೆ ಏರಿಕೆಯಾಗಿ ಡಬಲ್ ಅಂಕಿಯಲ್ಲಿ ಬೆಲೆ ಏರಿಕೆ, ಸಿಂಗಲ್ ಅಂಕಿಯಲ್ಲಿ ಆರ್ಥಿಕ ಬೆಳವಣಿಗೆಯಾಗಿತ್ತು. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಆರೋಪ ಯುಪಿಎ ಸರ್ಕಾರದ ಮೇಲೆ ಇತ್ತು. ಆಕಾಶ, ಭೂಮಿ, ನೀರಿನಲ್ಲಿ ಹಗರಣವಿತ್ತು. ಎಲ್ಲೆಡೆ ಹಗರಣಗಳ ಸುರಿಮಳೆ ಇತ್ತು. ಆದ್ರೆ, ಪ್ರಧಾನಿ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಆರ್ಥಿಕತೆಯಲ್ಲಿ ಸದೃಢತೆ ತಂದಿದ್ದಾರೆ" ಎಂದರು.
"ಮೋದಿಯವರ ಕಾಲದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯ ನಿಧಿ ಇದೆ. 573 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಫಂಡ್ ಇದೆ. 543 ಬಿಲಿಯನ್ ಡಾಲರ್ ಗೋಲ್ಡ್ ನಿಧಿ ಇದೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿ ವಿನಿಮಯ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಬಂಡವಾಳ ಭಾರತಕ್ಕೆ ಹರಿದು ಬರುತ್ತಿದೆ. ಇದು ಭಾರತದ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ" ಎಂದು ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
"ಮೋದಿಯವರ ಕಾಲದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಕೋವಿಡ್ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ 130 ಕೋಟಿ ಭಾರತೀಯರಿಗೆ ಮೂರು ಬಾರಿ ಲಸಿಕೆ ಕೊಡಿಸಿ, ಆರ್ಥಿಕ ಸದೃಢತೆಯನ್ನು ಕಾಪಾಡಿರುವುದನ್ನು ಯಾರೂ ಮರೆಯುವಂತಿಲ್ಲ. ಕೋವಿಡ್ ಸಂದರ್ಭದಲ್ಲಿ ಮೋದಿಯವರು ಪ್ರತಿ ತಿಂಗಳು ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದಾರೆ. ಇದನ್ನು ನೆನಪಿಟ್ಟುಕೊಳ್ಳಬೇಕು" ಎಂದು ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
"ಪದೇ ಪದೇ ಸುಳ್ಳು ಹೇಳಿದರೆ ಅದು ಸತ್ಯವಾಗಲ್ಲ. ನಮ್ಮ ಸರ್ಕಾರ ಇದ್ದಾಗ ಸರ್ಪ್ಲಸ್ ಬಜೆಟ್ ಮಂಡನೆ ಮಾಡಿದ್ದೆವು. ನೀವು ಬಂದು ಮೂರೇ ತಿಂಗಳಲ್ಲಿ ಕೊರತೆ ಬಜೆಟ್ ಮಾಡಿದ್ದೀರಿ. 58 ಸಾವಿರ ಕೋಟಿ ದಲಿತರ ಹಣದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೀರಿ. ನೀರಾವರಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಅಭಿವೃದ್ಧಿಗೆ ಹಣ ಮೀಸಲಿಟ್ಟಿಲ್ಲ ಅಂತ ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಕಲ್ಯಾಣ ಕರ್ನಾಟಕ್ಕೆ ತಾವು ಕೊಟ್ಟ ಹಣ ಯಾವತ್ತೂ ಬಳಕೆ ಮಾಡಿಲ್ಲ. ನಮ್ಮ ಅವಧಿಯಲ್ಲಿ 3000 ಕೋಟಿ ನೀಡಿ, ಕ್ರಿಯಾ ಯೋಜನೆ ಮಾಡಿ ಬಳಕೆ ಮಾಡಿದ್ದೇವು. 371 ಜೆ ಮಾಡಿ ಏನೂ ಪ್ರಯೋಜನ ಇಲ್ಲ ಅಂತ ಕಲ್ಯಾಣ ಕರ್ನಾಟಕದ ಜನ ಸಾರ್ವಜನಿಕವಾಗಿ ಕೂಗುತ್ತಿದ್ದಾರೆ. 371 ಜೆ ಜಾರಿ ಮಾಡಿದ್ದು ವೈಜನಾಥ ಪಾಟೀಲರ ಹೋರಾಟ ಹಾಗೂ ಯಡಿಯೂರಪ್ಪ ಅವರ ಪ್ರಯತ್ನದಿಂದ" ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದಲ್ಲಿ ದುಬಾರಿ ದುನಿಯಾ, ಬೆಲೆ ಏರಿಕೆಯೇ ಆರನೇ ಗ್ಯಾರಂಟಿ: ಬೊಮ್ಮಾಯಿ
ಅಭಿವೃದ್ಧಿಗೆ ಹಣ ಇಲ್ಲ ಅಂತ ನೀವೇ ಶಾಸಕರಿಗೆ ಹೇಳಿದ್ದೀರಿ, ಉಪ ಮುಖ್ಯಮಂತ್ರಿ ಕೂಡ ಅಭಿವೃದ್ಧಿಗೆ ಹಣ ಕೇಳಬೇಡಿ ಅಂತ ಹೇಳಿದ್ದಾರೆ. ನಮ್ಮ ಸರ್ಕಾರ ಸದೃಢ ಆರ್ಥಿಕತೆ ಮಾಡಿದ್ದರಿಂದ ನೀವು ಗ್ಯಾರಂಟಿಗಳನ್ನು ಕೊಡುತ್ತಿದ್ದೀರಿ, ಅವುಗಳಲ್ಲಿಯೂ ಕೂಡ ಷರತ್ತು ಹಾಕಿದ್ದೀರಿ. ಅಕ್ಕಿ ಕೊಡುತ್ತೇವೆಂದು ಕೊಡದೇ ನಿಮ್ಮ ವೈಫಲ್ಯವನ್ನು ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿದ್ದೀರಿ. ಗೃಹಜ್ಯೋತಿ ಯಲ್ಲಿ 200 ಯುನಿಟ್ ಕೊಡುತ್ತೇವೆ ಅಂತ ಹೇಳಿ ಸರಾಸರಿ ಅಂತ 43 ಯುನಿಟ್ ಕೊಡುತ್ತಿದ್ದೀರಾ, ಇದು ಜನರಿಗೆ ಮಾಡಿದ ಮೋಸ ಅಲ್ಲವಾ?, ಗೃಹಲಕ್ಷ್ಮಿ ಇನ್ನೂ ಜಾರಿಗೆ ತರಲಿಕ್ಕೆ ಆಗಿಲ್ಲ. ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಪೂರ್ಣ ಸಂಬಳ ಕೊಡಲಾಗುತ್ತಿಲ್ಲ. ಪೊಲೀಸರಿಗೆ ಸಂಬಳ ಕೊಡಲಿಕ್ಕೆ ಆಗುತ್ತಿಲ್ಲ. ನಾವು ಕೋವಿಡ್ ಸಂದರ್ಭದಲ್ಲೂ ಎಲ್ಲ ಉದ್ಯೋಗಿಗಳಿಗೆ ಪೂರ್ಣ ಸಂಬಳ ಕೊಟ್ಟಿದ್ದೆವು. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದೀರಿ. ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ರಾಜ್ಯವನ್ನು ಹೇಗೆ ದಿವಾಳಿ ಮಾಡುತ್ತಿದ್ದೀರಾ ಅನ್ನುವುದನ್ನು ಜನತೆ ನೋಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೇಳಿದರು.