ಬೆಂಗಳೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಹಾಗೂ ರಾಜ್ಯ ಗೃಹ ಖಾತೆ ಸಚಿವ ಬಸವರಾಜ್ ಬೊಮ್ಮಾಯಿಗೆ ಹೈಕಮಾಂಡ್ ಅಂತಿಮವಾಗಿ ಮಣೆ ಹಾಕಿದೆ. ಈ ಮೂಲಕ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.
ಮುಖ್ಯಮಂತ್ರಿ ಆಯ್ಕೆಗೆ ಅನೇಕ ಹೆಸರು ಕೇಳಿ ಬಂದಿದ್ದವು. ಪ್ರಮುಖವಾಗಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಪ್ರಲ್ಹಾದ್ ಜೋಶಿ, ಸಿ.ಟಿ ರವಿ, ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ ಹಾಗೂ ಅರವಿಂದ್ ಬೆಲ್ಲದ್ ಹೆಸರು ಮುಂಚೂಣಿಯಲ್ಲಿದ್ದವು. ಆದರೆ ಲಿಂಗಾಯತ ಸಮುದಾಯಕ್ಕೆ ಸೇರಿದ್ದ ಬೊಮ್ಮಾಯಿ ಹಾಗೂ ಬೆಲ್ಲದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಬಿಎಸ್ವೈಗೆ ಹೆಚ್ಚು ಆಪ್ತರಾಗಿರುವ ಬಸವರಾಜ ಬೊಮ್ಮಾಯಿಗೆ ಇದೀಗ ಹೈಕಮಾಂಡ್ ಮಣೆ ಹಾಕಿದೆ. ಈ ಮೂಲಕ ರಾಜ್ಯದಲ್ಲಿ ಬೊಮ್ಮಾಯಿ ಪರ್ವ ಶುರುವಾಗಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ವೀಕ್ಷಕರಾಗಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ವೀಕ್ಷಕರಾಗಿ ಶಾಸಕಾಂಗ ಸಭೆಯಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮೊದಲು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಚರ್ಚೆ ನಡೆಸಿದ್ದರು.
ಇಂದು ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬೊಮ್ಮಾಯಿ ಹೆಸರು ಅಂತಿಮ ಮಾಡಲಾಗಿದ್ದು, ನಾಳೆ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ ಅವರ ಪುತ್ರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.