ಬೆಂಗಳೂರು: ಬೀದರ್ ಜಿಲ್ಲೆಯ ಬಸವಕಲ್ಯಾಣ ಶಾಸಕ ಬಿ. ನಾರಾಯಣ ರಾವ್ ನಿಧನರಾಗಿ 12 ದಿನ ಕಳೆದಿದೆ. ಉಪಚುನಾವಣೆ ಘೋಷಣೆ ಆಗಿಲ್ಲ, ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲಿನ ಪರಿಸ್ಥಿತಿ ಅರಿತು ಇನ್ನೂ ಉಪಚುನಾವಣೆ ಕುರಿತು ಸಭೆ ನಡೆಸಿಲ್ಲ. ಇದೆಲ್ಲದರ ನಡುವೆ ನಾರಾಯಣರಾವ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬ ಆಘಾತದಿಂದ ಇನ್ನೂ ಹೊರ ಬಂದಿಲ್ಲ.
40 ವರ್ಷಗಳ ಕಾಲ ಪಕ್ಷ ಸಂಘಟನೆಯನ್ನು ಅವಿರತವಾಗಿ ಮಾಡಿಕೊಂಡು ಬಂದಿದ್ದ ನಾರಾಯಣ ರಾವ್ ಅವರು ಇಲ್ಲಾ ಅನ್ನುವುದನ್ನೇ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅಕ್ಷರಶಃ ಮತದಾರರು ಕುಟುಂಬ ಸದಸ್ಯನನ್ನು ಕಳೆದುಕೊಂಡಷ್ಟು ನೋವಿನಲ್ಲಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷದ ಕಲ್ಯಾಣ ಕರ್ನಾಟಕ ಭಾಗದ ಕೆಲ ಮುಖಂಡರು ನಾರಾಯಣರಾವ್ ಅವರಿಂದ ತೆರವಾದ ಕ್ಷೇತ್ರಕ್ಕೆ ಉಮೇದುವಾರರಾಗಲು ಮುಂದಾಗಿದ್ದಾರೆ.
ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಅನ್ನುವ ಗಾದೆ ಮಾತು ಸದ್ಯ ಬಸವಕಲ್ಯಾಣ ಕ್ಷೇತ್ರದ ಚಟುವಟಿಕೆ ಕಂಡಾಗ ಅರಿವಾಗುತ್ತದೆ. 1952ರಿಂದ ನಡೆದ 14 ಚುನಾವಣೆಗಳ ಪೈಕಿ ಅತಿ ಹೆಚ್ಚು ಸಾರಿ ಜನತಾ ಪಕ್ಷ ಗೆಲುವು ಸಾಧಿಸಿತ್ತು. 7 ಬಾರಿ ಇಲ್ಲಿ ಅವರಿಗೆ ಗೆಲುವಾಗಿತ್ತು. ಈಗ ಆ ಪಕ್ಷ ಅಸ್ಥಿತ್ವದಲ್ಲಿಲ್ಲ. ಇದನ್ನು ಹೊರತುಪಡಿಸಿದ್ರೆ ಗಟ್ಟಿ ನೆಲೆ ಕಂಡುಕೊಂಡಿದ್ದು ಕಾಂಗ್ರೆಸ್. ನಾರಾಯಣ್ ರಾವ್ ಸೇರಿದಂತೆ ಒಟ್ಟು 5 ಬಾರಿ ಇಲ್ಲಿ ಕೈ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಬಸವರಾಜ್ ಪಾಟೀಲ್ ಅಟ್ಟೂರು ಅವರಿಗೆ ಇಲ್ಲಿ ಜನ ಹೆಚ್ಚು ಮಣೆ ಹಾಕಿದ್ದಾರೆ. ಒಟ್ಟು 5 ಬಾರಿ ಇವರು ಗೆದ್ದಿದ್ದು, ಬಿಜೆಪಿಗೆ ಸಿಕ್ಕ ಏಕೈಕ ಗೆಲುವು ಕೂಡ ಇವರಿಂದಲೇ ಎನ್ನುವುದು ವಿಶೇಷ.
ಸದ್ಯ ಕಾಂಗ್ರೆಸ್ ಪಾಲಿಗೆ ಇದು ಆಯಕಟ್ಟಿನ ಕ್ಷೇತ್ರ. ಅನುಕಂಪದ ಅಲೆಯ ಮೇಲೆ ಗೆಲ್ಲುವ ಅವಕಾಶ ಇದೆ. ನಾರಾಯಣರಾವ್ ಕುಟುಂಬ ಸದಸ್ಯರಿಗೇ ಟಿಕೆಟ್ ನೀಡಿದ್ರೆ ಜನರ ಒಲವು ಉಳಿಯಲಿದೆ ಎನ್ನುವ ವಿಶ್ವಾಸ. ಸಕ್ರಿಯವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ನಾರಾಯಣ್ ರಾವ್ ಪುತ್ರ ಗೌತಮ್ ರಾವ್ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಇವರಿಗೆ ಟಿಕೆಟ್ ಎನ್ನಲಾಗುತ್ತಿದೆ. ಇವರ ಪರ ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜೋರಾಗಿಯೇ ಬ್ಯಾಟ್ ಬೀಸಲಿದ್ದಾರೆ.
ಯಾಕೆಂದರೆ, ನಾರಾಯಣ್ ರಾವ್ ಅವರು ಸಿದ್ದರಾಮಯ್ಯಗೆ ಆಪ್ತರಾಗಿದ್ದರು. ಆದರೂ ಒಂದು ವರ್ಗ, ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದೆ. ಈ ನಡುವೆ ಸಿದ್ದರಾಮಯ್ಯ ಜತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಿಲ್ಲಲಿದ್ದಾರೆ. ನಾರಾಯಣ ರಾವ್ ಕುಟುಂಬಕ್ಕೆ ಆಪ್ತರಾಗಿರುವ ಇವರು, ಕ್ಷೇತ್ರದಲ್ಲಿ ಪಕ್ಷ ಕಟ್ಟುವಲ್ಲಿ ನಾರಾಯಣ ರಾವ್ ಕುಟುಂಬ ಎಷ್ಟು ಶ್ರಮ ಹಾಕಿದೆ ಎನ್ನುವ ಅರಿವಿದೆ.
ನಾರಾಯಣ ರಾವ್ ಪುತ್ರ ಗೌತಮ್ ಪ್ರಬಲ ಹಾಗೂ ಬಹುತೇಕ ಖಚಿತ ಅಭ್ಯರ್ಥಿ ಆಗಲಿದ್ದಾರೆ. ಆದರೆ, ಇವರನ್ನು ಹೊರತುಪಡಿಸಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ರಾಜಕಾರಣಿಗಳು ಬಸವ ಕಲ್ಯಾಣ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧಿಗಳಾಗುವ ಆಸಕ್ತಿ ತೋರಿಸುತ್ತಿದ್ದಾರೆ. ಇವರೇನು ರಾಜಕೀಯ ಸ್ಥಾನ ಮಾನ ಸಿಗದವರಲ್ಲ. ಹಾಲಿ ಎಮ್ಎಲ್ಸಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕಾಂಕ್ಷಿಗಳಲ್ಲಿ ಮೊದಲನೆಯವರು ವಿಜಯ್ ಸಿಂಗ್, ಹಾಲಿ ವಿಧಾನಪರಿಷತ್ ಸದಸ್ಯರು ಜತೆಗೆ ಮಾಜಿ ಸಿಎಂ ಎನ್ ಧರಂಸಿಂಗ್ ಎರಡನೇ ಪುತ್ರ.
ಮತ್ತೊಬ್ಬರು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸೋದರ ಚಂದ್ರಶೇಖರ್ ಪಾಟೀಲ್. ಇವರು ಸಹ ವಿಧಾನ ಪರಿಷತ್ ಸದಸ್ಯರು, ಅಲ್ಲದೇ ಇವರ ಸ್ಪರ್ಧೆಯ ನಡುವೆ ಪಕ್ಷದ ಹೈಕಮಾಂಡ್ ಒಂದು ಅವಕಾಶ ನೀಡುವುದಾಗಿ ಮಾಜಿ ಶಾಸಕ ಅಶೋಕ್ ಖೇಣಿಗೆ ತಿಳಿಸಿದೆಯಂತೆ. ಆದರೆ, ಅದಕ್ಕೆ ಖೇಣಿ ನಯವಾಗಿಯೇ ತಿರಸ್ಕರಿಸಿದ್ದಾರೆ. ರಾಜಕೀಯ ಹಿಡಿತ ಕೈತಪ್ಪಿದೆ ಈಗ ಬೇಡ ಅಂದಿದ್ದಾರಂತೆ. ಟಿಕೆಟ್ ಅಂತಿಮಗೊಳ್ಳುವಲ್ಲಿ ಸಿದ್ದರಾಮಯ್ಯ ಹಾಗೂ ಈಶ್ವರ್ ಖಂಡ್ರೆ ನಿರ್ಧಾರವೇ ಅಂತಿಮವಾಗಲಿದೆ. ಇವರು ನಾರಾಯಣ್ ರಾವ್ ಕುಟುಂಬದ ಬೆನ್ನಿಗಿದ್ದಾರೆ ಎಂಬ ಮಾತಿದೆ. ಆದರೆ, ನಾರಾಯಣ್ ರಾವ್ ನಿಧನರಾಗಿ ವಾರ ಕಳೆಯುವ ಮುನ್ನವೇ ಇಲ್ಲಿ ಅಭ್ಯರ್ಥಿಗಳಾಗಲು ಹಲವರು ಪ್ರಯತ್ನ ಆರಂಭಿಸಿದ್ದಾರೆ ಅನ್ನೋದು ಎಲ್ಲಕ್ಕಿಂತ ನೋವಿನ ಸಂಗತಿ.