ಬೆಂಗಳೂರು: ಬಿಜೆಪಿ ಹೈಕಮಾಂಡ್ ನೀಡಿದ ಖಡಕ್ ಸೂಚನೆ ಹಿನ್ನೆಲೆ ಜಿಂದಾಲ್ಗೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. ಇದಕ್ಕಾಗಿ ಹೈಕಮಾಂಡ್ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ನಮ್ಮ ರಾಜ್ಯದ ನೆಲ-ಜಲ ಮತ್ತು ನೈಸರ್ಗಿಕ ಸಂಪತ್ತು ಉಳಿಸಲು ನಾವು ಇತ್ತೀಚೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡ ಸುಮಾರು 3,660 ಎಕರೆ ಖನಿಜ ಸಂಪತ್ತು ಹೊಂದಿದ ಪ್ರತಿ ಎಕರೆಗೆ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಕೇವಲ ಎಕರೆಗೆ 1 ಲಕ್ಷದ 25 ಸಾವಿರ ರೂಪಾಯಿಗೆ ಜಿಂದಾಲ್ ಕಂಪನಿಗೆ ಮಾರಾಟ ಮಾಡುವ ರಾಜ್ಯ ಸರ್ಕಾರದ ಕ್ಯಾಬಿನೆಟ್ ನಿರ್ಣಯದ ವಿರುದ್ಧ ದನಿ ಎತ್ತಿದ್ದೆವು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಯಡಿಯೂರಪ್ಪ ಸಂಪುಟ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ಪತ್ರ ಬರೆದಿದ್ದೆವು. ನಮ್ಮ ಪಕ್ಷದ ಹೈಕಮಾಂಡ್ ನೀಡಿದ ಖಡಕ್ ಸೂಚನೆ ಹಿನ್ನೆಲೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಸ್ಟೀಲ್ ಕಂಪನಿಗೆ ನೀಡಿದ್ದ ಭೂಮಿಯನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಫೇಸ್ಬುಕ್ನಲ್ಲಿ ಯತ್ನಾಳ್ ಬರೆದುಕೊಂಡಿದ್ದಾರೆ.
ನಮ್ಮ ಹೋರಾಟಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ಎಲ್ಲ ನಾಯಕರಿಗೆ, ನಮ್ಮ ಹೋರಾಟ ಬೆಂಬಲಿಸಿದ ನಾಡಿನ ಮಹಾಜನತೆಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ.
ಓದಿ: ಮೇಕೆದಾಟು ಯೋಜನೆ ವಿವಾದ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ