ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ, ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪ್ರಾರಂಭವಾಗಿದ್ದು, ಬಿಬಿಎಂಪಿ ಶಾಲಾ ಮಕ್ಕಳಿಗೆ ಲ್ಯಾಪ್ಟಾಪ್ ಅಥವಾ ಟ್ಯಾಬ್ ತಕ್ಷಣ ಕೊಡಬೇಕೆಂದು ಪಾಲಿಕೆ ಸದಸ್ಯರು ಒತ್ತಾಯಿಸಿದ್ದರು. ಆದರೆ ಪಾಲಿಕೆ ಸದಸ್ಯರ ವಿಶೇಷ ಅನುದಾನದ ಅಡಿ ಕೊಡಬೇಕಿದ್ದ ಈ ಯೋಜನೆಯಲ್ಲಿಯೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಜೊತೆಗೆ ತಾತ್ಕಾಲಿಕವಾಗಿ ಈ ಯೋಜನೆ ತಡೆಹಿಡಿಯುವಂತೆ ಸರ್ಕಾರ ಹಾಗೂ ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಓದುವ ಬಡ ಮಕ್ಕಳಿಗೆ 5ರಿಂದ 10ನೇ ತರಗತಿ ವರೆಗೆ ಟ್ಯಾಬ್ ನೀಡುವುದು, 10ನೇ ತರಗತಿಯಿಂದ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಆಗಿತ್ತು. ಆದರೆ ಕಿಯೋನಿಕ್ಸ್ ಸಂಸ್ಥೆಯ ಲ್ಯಾಪ್ಟಾಪ್ ದರ ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿರುವುದರಿಂದ ಖರೀದಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಈ ಬಗ್ಗೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಪಾಲಿಕೆ ಆಯುಕ್ತರು ತಾತ್ಕಾಲಿಕವಾಗಿ ಮುಂದೂಡುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಮಾನ್ಯ ಮಾಡಿರುವ ಕಿಯೋನಿಕ್ಸ್, ಜಂಪ್ ಪೋರ್ಟ್ ಅಥವಾ ಮಾರುಕಟ್ಟೆ ದರದಂತೆ ಎಲ್ಲಿ ಕಡಿಮೆ ಇದೆಯೋ ಆ ಸಂಸ್ಥೆಯಿಂದ ಖರೀದಿಸಲು ಆಯುಕ್ತರು ಸೂಚಿಸಿದ್ದಾರೆ ಎಂದರು.
ಪಾಲಿಕೆ ಸದಸ್ಯರ ವಿಶೇಷ ಅನುದಾನದಡಿ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಬಹುದು, ಲ್ಯಾಪ್ಟಾಪ್ ಅಥವಾ ಟ್ಯಾಬ್ ನೀಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಜಾಬ್ ಕೋಡ್ ನೀಡುವ ಸಂಧರ್ಭದಲ್ಲೇ ಹೇಳಬೇಕಿತ್ತು, ಈಗ ಬಡವರಿಗೆ ಏನು ಉತ್ತರ ಕೊಡುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ತಿಳಿಸಿದರು.
ಯಲಹಂಕ ವಲಯದಲ್ಲಿ 88 ಲ್ಯಾಪ್ಟಾಪ್ ನೀಡಲು ನಿರ್ಧರಿಸಲಾಗಿದ್ದು, ಒಂದು ಲ್ಯಾಪ್ಟಾಪ್ ಗೆ 59,999 ರೂ. ನಿಗದಿ ಮಾಡಲಾಗಿದ್ದು, ಒಟ್ಟು 52.80 ಕೋಟಿ ರೂ. ಬಿಲ್ ಸಿದ್ಧಪಡಿಸಲಾಗಿದೆ. ಹೀಗಾಗಿ ಭ್ರಷ್ಟಾಚಾರದ ಸುಳಿವು ಸಿಕ್ಕಿದ್ದು. ಯೋಜನೆಗೆ ತಡೆ ನೀಡಲಾಗಿದೆ.
ಇನ್ನು ಆಯುಕ್ತರಾದ ಮಂಜುನಾಥ್ ಪ್ರಸಾದ್ ಪ್ರತಿಕ್ರಿಯಿಸಿ, ಪಾಲಿಕೆ ಸದಸ್ಯರ ಅನುದಾನದಲ್ಲಿ ಬಳಸಲು ಕೌನ್ಸಿಲ್ನಲ್ಲಿ ನಿರ್ಣಯ ಆಗಿದೆ. ಆದರೆ ಮಾರುಕಟ್ಟೆಯಲ್ಲಿನ ಲ್ಯಾಪ್ಟಾಪ್ ದರ ಪರಿಶೀಲಿಸಲಾಗುವುದು. ಕಾಮಗಾರಿ ಹೊರತಾಗಿ ವಿಶೇಷ ಅನುದಾನದ ಬಳಕೆಯ ಸಾಧ್ಯತೆ ಇದೆಯಾ? ಎಂಬುದನ್ನೂ ಪರಿಶೀಲಿಸಲಾಗುವುದು ಎಂದರು.