ಬೆಂಗಳೂರು: ಕೊರೊನಾದಿಂದ ಪತ್ನಿ ಸಾವನ್ನಪ್ಪಿರುವ ಸಮಯ ಸರಿಯಿಲ್ಲ ಎಂದು ಆಕೆಯ ಪತಿಯನ್ನ 3 ತಿಂಗಳು ಮನೆಯಿಂದ ಹೊರ ಕಳುಹಿಸಿ ಸಂಬಂಧಿಕರೇ 5 ಲಕ್ಷ ರೂಪಾಯಿ ಜೊತೆ ಚಿನ್ನಾಭರಣ ದೋಚಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಪ್ರವೀಣ್ ಕುಮಾರ್ ಎಂಬುವರು ಆರ್.ಆರ್. ನಗರದ ಚನ್ನಸಂದ್ರದ ನಿವಾಸಿಯಾಗಿರುವ ಕರಿಷ್ಮಾ ಕ್ಲಾಸಿಕ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. 2015ರಲ್ಲಿ ನಿಮಿತಾ ಎಂಬುವರನ್ನು ಪ್ರವೀಣ್ ವರಿಸಿದ್ದರು. ಈ ನಡುವೆ ಕಳೆದ ಏಪ್ರಿಲ್ 20ರಂದು ನಿಮಿತಾಗೆ ಉಸಿರಾಟ ಸಮಸ್ಯೆ ಕಂಡುಬಂದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 2ರಂದು ಮೃತಪಟ್ಟಿದ್ದರು.
ಮೇ 13ರಂದು ಪತ್ನಿಯ ತಿಥಿಕಾರ್ಯ ಮುಗಿಸಿದ್ದ ಪ್ರವೀಣ್ ಅವರಿಗೆ ಮೃತಳ ಕುಟುಂಬಸ್ಥರು ನಿಮಿತಾ ಸಾವನ್ನಪ್ಪಿರುವ ಗಳಿಗೆ ಸರಿಯಿಲ್ಲ. ಹೀಗಾಗಿ ಮೂರು ತಿಂಗಳು ಮನೆಗೆ ಬರಬಾರದು ಎಂದು ನಂಬಿಸಿ ಬೇರೆ ಇರುವಂತೆ ಹೇಳಿದ್ದಾರೆ. ಇದಾದ ಒಂದು ತಿಂಗಳ ಬಳಿಕ ಪ್ರವೀಣ್ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಪರಿಶೀಲಿಸಿದಾಗ ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ ಎಂದು ಕುಟುಂಬಸ್ಥರ ವಿರುದ್ಧ ಆರೋಪಿಸಿದ್ದಾರೆ. ಈ ಸಂಬಂಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ದೂರು ನೀಡಿದ್ದು, ಎನ್ಸಿಆರ್ ದಾಖಲಿಸಿದ್ದಾರೆ.
ಓದಿ: ವಿಶ್ವ ಅಪ್ಪಂದಿರ ದಿನದಂದೇ ಹೆತ್ತವರಿಗೆ ಮಗ ಥಳಿಸುತ್ತಿರುವ ವಿಡಿಯೋ ವೈರಲ್.. ತಾಯಿ ಸಾವು