ಬೆಂಗಳೂರು: ಡಿ.ಜೆ ಹಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಟ್ಟು 8 ಜನ ಆರೋಪಿಗಳನ್ನ ಪೊಲೀಸರು ತನಿಖೆ ನಡೆಸಿ, ಮೆಡಿಕಲ್ ಚೆಕ್ಅಪ್ ನಡೆಸಲು ಕರೆದೊಯ್ದಿದ್ದಾರೆ. ಚೆಕ್ಅಪ್ ನಡೆಸಿದ ಬಳಿಕ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಆರೋಪಿಗಳನ್ನು ಹಾಜರುಪಡಿಸಿ, ಹೆಚ್ಚಿನ ತನಿಖೆ ಅವಶ್ಯಕತೆ ಇದ್ದರೆ ವಶಕ್ಕೆ ಪಡೆಯಲಿದ್ದಾರೆ.
ಸದ್ಯ ಪೊಲೀಸರು ಬಿಎಂಟಿಸಿ ಬಸ್ನಲ್ಲಿ ಆರೋಪಿಗಳನ್ನ ಕರೆದೊಯ್ದಿದ್ದು, ಈ ವೇಳೆ ತಮ್ಮ ಮಕ್ಕಳು ಹಾಗೂ ಗಂಡಂದಿರನ್ನ ನೋಡಿ ಅವರ ಮನೆಯವರು ಕೈಮುಗಿದು ಕಣ್ಣೀರು ಹಾಕಿದರು.
ಈ ವೇಳೆ ಪತಿಯು ಪೊಲೀಸರ ವಶದಲ್ಲಿರುವುದನ್ನು ನೋಡಿದ ಆರೋಪಿಯ ಪತ್ನಿಯೊಬ್ಬರು ಕುಸಿದು ಬಿದ್ದ ಘಟನೆ ಕೂಡ ನಡೆಯಿತು. ಕೂಡಲೇ ಆ ಮಹಿಳೆಗೆ ಸ್ಥಳದಲ್ಲಿದ್ದ ಜನರು ನೀರು ಕುಡಿಸಿ ಆರೈಕೆ ಮಾಡಿದರು.