ಬೆಂಗಳೂರು: ಚಾಮರಾಜಪೇಟೆ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣ ಸಂಬಂಧ ಒಂದು ವರ್ಷದ ಬಳಿಕ ಮಗು ಸಿಕ್ಕಿದರೂ ಕೂಡ ತಾಯಿ ಮಡಿಲು ಸೇರಲು ಕಾನೂನು ತೊಡಕು ಎದುರಾಗಿದೆ. ಪೊಲೀಸರು ಮಕ್ಕಳ ಕಳ್ಳಿಯನ್ನು ಬಂಧಿಸಿ ಆಕೆ ನೀಡಿದ ಮಾಹಿತಿ ಮೇರೆಗೆ ಕೊಪ್ಪಳ ಮೂಲದ ದಂಪತಿ ಬಳಿಯಿದ್ದ ಆ ಮಗುವನ್ನು ನಗರಕ್ಕೆ ಕರೆ ತಂದಿದ್ದಾರೆ. ಹೆತ್ತವರ ಮಡಿಲಿಗೆ ಒಪ್ಪಿಸುವ ಮುನ್ನ ಡಿಎನ್ಎ ಸೇರಿದಂತೆ ಹಲವು ರೀತಿಯ ವೈದ್ಯಕೀಯ ಪರೀಕ್ಷೆ ಮಾಡಿಸಿ ವರದಿ ಬಂದ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಪೊಲೀಸರು ವರದಿ ನೀಡಲಿದ್ದಾರೆ. ಅಲ್ಲಿಯೂ ವಿಚಾರಣೆ ಆದ ಬಳಿಕವಷ್ಟೇ ಯಾರ ಮಡಿಲಿಗೆ ಮಗು ನೀಡಬೇಕು ಎಂಬುದರ ಬಗ್ಗೆ ನಿರ್ಧಾರವಾಗಲಿದೆ.
ಪೋಷಕರ ಮಡಿಲು ಸೇರಲು ಇನ್ನೂ 15 ದಿನ ಬೇಕು:
ಪತ್ತೆಯಾಗಿರುವ ಮಗುವಿನ ನಿಜವಾದ ಪೋಷಕರ ಬಗ್ಗೆ ವೈಜ್ಞಾನಿಕವಾಗಿ ತಿಳಿಯಲು ಪೊಲೀಸರು ಡಿಎನ್ಎ ಪರೀಕ್ಷೆ ಮೊರೆ ಹೋಗಿದ್ದಾರೆ. ಡಿನ್ಎನ್ಎ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ಜೂ. 16ರಂದು ಪರೀಕ್ಷೆ ನಡೆಯಲಿದೆ. ನಿಗದಿತ ದಿನಾಂಕದಂದೇ ತಾಯಿ ಹಾಗೂ ಮಗುವಿನ ಡಿಎನ್ಎ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲಾಗುತ್ತದೆ. ಲ್ಯಾಬ್ ರಿಪೋರ್ಟ್ ಬರಲು ಕನಿಷ್ಠ ಹತ್ತು ದಿನವಾದರೂ ಬೇಕಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಪಾದರಾಯನಪುರ ನಿವಾಸಿಯಾದ ನವೀದ್ ಪಾಷ ಹಾಗೂ ಹುಸ್ನಾಬಾನು ದಂಪತಿಗೆ ಕಳೆದ ವರ್ಷ ಮೇ 29ರಂದು ಚಾಮರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಾಗಿತ್ತು. ಶಿಶು ಜನಿಸಿದ ಎರಡು ಗಂಟೆಯಲ್ಲಿ ಆರೋಪಿತೆ ರಶ್ಮಿ ಮಗು ಕದ್ದಿದ್ದಳು. ಮಗು ಕಳ್ಳತನವಾಗಿ ಒಂದು ವರ್ಷಕ್ಕೆ ಅಂದರೆ ಕಳೆದ ತಿಂಗಳು ಮೇ 29ರಂದು ಪೊಲೀಸರು ಮಗು ಪತ್ತೆ ಹಚ್ಚಿದ್ದರು. ಆದ್ರೆ ಇನ್ನೂ ಮಗು ಪೋಷಕರ ಕೈಸೇರಿಲ್ಲ. ಡಿಎನ್ಎ ಪರೀಕ್ಷೆಯಲ್ಲಿ ದೃಢವಾದ ಬಳಿಕವಷ್ಟೇ ಪೊಲೀಸರು ಪೋಷಕರಿಗೆ ಒಪ್ಪಿಸಲಿದ್ದಾರೆ. ಅಲ್ಲಿಯವರೆಗೂ ಹೆತ್ತವರ ಸಂಕಷ್ಟ ಹೇಳತೀರದು. ಪ್ರತಿ ದಿನ ಠಾಣೆಗೆ ಹೋಗಿ ಮಗು ನೀಡಿ ತಾಯಿ ಹುಸ್ನಾಬಾನು ಕಣ್ಣೀರು ಸುರಿಸುತ್ತಿದ್ದಾರೆ.
ರಾಜಕುಮಾರನಂತೆ ಸಾಕಿದ್ದೇವೆ:
ಮಗುವನ್ನು ಪಡೆದಿದ್ದ ಕೊಪ್ಪಳ ಮೂಲದ ದಂಪತಿಯನ್ನು ಈಗಾಗಲೇ ಒಂದು ಬಾರಿ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಿದೆ. ಡಿಎನ್ಎ ವರದಿ ಬಳಿಕ ಮಗುವಿನ ಹೆತ್ತವರಿಗೂ ಹಾಗೂ ಪಾಲನೆ ಮಾಡಿದ ದಂಪತಿಗೂ ವಿಚಾರಣೆ ನಡೆಸಲಿದೆ. ಕೊಪ್ಪಳ ಮೂಲದ ದಂಪತಿ ತಮ್ಮದೇ ಮಗುವೆಂದು ಸಾಕಿ ಸಲಹುತ್ತಿದ್ದೇವೆ. ಮಗುವನ್ನು ರಾಜಕುಮಾರನಂತೆ ಸಾಕಿದ್ದೇವೆ. ದಯವಿಟ್ಟು ಮಗುವನ್ನು ನಮ್ಮಿಂದ ದೂರ ಮಾಡಬೇಡಿ ಎಂದು ಕಣ್ಣೀರು ಸುರಿಸಿ ಪೊಲೀಸರಲ್ಲಿ ಮನವಿ ಮಾಡುತ್ತಿದ್ದಾರೆ. ಸದ್ಯ ಮಗು ಈ ಕೊಪ್ಪಳ ದಂಪತಿಯ ಆಶ್ರಯದಲ್ಲಿದೆ.
ಪ್ರಕರಣದ ಹಿನ್ನೆಲೆ:
ಮಗು ಕಳ್ಳತನ ಪ್ರಕರಣ ಆರೋಪಿತೆಯಾಗಿರುವ ಉತ್ತರ ಕರ್ನಾಟಕದ ಮೂಲದ ರಶ್ಮಿ ಕಳೆದ ವರ್ಷ ಮೇ 29ರಂದು ಮಗು ಕದ್ದು ಈ ಕೊಪ್ಪಳ ದಂಪತಿಗೆ ನೀಡಿ 15 ಲಕ್ಷ ರೂ. ಪಡೆದುಕೊಂಡಿದ್ದಳು. ಮನೋವೈದ್ಯೆಯಾಗಿದ್ದ ಈಕೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ವಿಜಯನಗರದ ನಿವಾಸಿಯಾಗಿದ್ದ ಈಕೆ 2014ರಲ್ಲಿ ಹುಬ್ಬಳ್ಳಿಯ ಎಸ್ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಕೊಪ್ಪಳ ಮೂಲದ ದಂಪತಿ ಪರಿಚಯವಾಗಿತ್ತು. ದಂಪತಿ ಮಗಳಿಗೆ ಬುದ್ಧಿಮಾಂದ್ಯತೆ ಹಿನ್ನೆಲೆಯಲ್ಲಿ ರಶ್ಮಿ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನೀಡಿದರೂ ಪ್ರಯೋಜನವಾಗದ ಕಾರಣ ಪೋಷಕರು ಬೇಸತ್ತಿದ್ದರು. ಹಾಗಾಗಿ ಅದೇ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ಒಂದು ಉಪಾಯ ಕೊಟ್ಟಿದ್ದಾಳೆ. ನಿಮ್ಮದೇ ವೀರ್ಯಾಣು ಮತ್ತು ಅಂಡಾಣು ಪಡೆದು ಮತ್ತೊಂದು ಮಹಿಳೆಗೆ ಇಂಜೆಕ್ಟ್ ಮಾಡಿ ಮಗು ಜನಿಸಿದ ಬಳಿಕ ನಿಮಗೆ ನೀಡುತ್ತೇನೆ ಎಂದು ಹೇಳಿ 15 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದಳು. ಮೊನ್ನೆ ಮೇ 29ರಂದು ಚಾಮರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ಆಟೋದಲ್ಲಿ ಬಂದು ಹುಸ್ಮಾಬಾನು ಅವರಿಗೆ ಸೇರಿದ ನವಜಾತ ಶಿಶವನ್ನು ಕ್ಷಣಾರ್ಧದಲ್ಲಿ ಅಪಹರಿಸಿ ಪರಾರಿಯಾಗಿದ್ದಳು.
ಇದನ್ನೂ ಓದಿ:ಸಿಡಿ ಪ್ರಕರಣ: ಇಂದು ನರೇಶ್, ಶ್ರವಣ್ ಜಾಮೀನು ಅರ್ಜಿ ತೀರ್ಪು