ಬೆಂಗಳೂರು: ಉಪ ಚುನಾವಣಾ ಕಣದಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಯುತ್ತಿದ್ದು, ಅಲ್ಲಲ್ಲಿ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಕೈ ಕೈ ಮಿಲಾಯಿಸುವ ಘಟನೆಗಳೂ ಕುಡಾ ನಡೆಯುತ್ತಿವೆ. ಆದ್ರೆ ಇಂದು ಅಪರೂಪದ ಘಟನೆಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಿದೆ. ಕೈ, ಬಿಜೆಪಿ ಅಭ್ಯರ್ಥಿಗಳ ನಡೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಯು.ಟಿ.ಖಾದರ್ ಹಾಗೂ ಬಿಜೆಪಿ ಮುಖಂಡ ನೆ.ಲ.ನರೇಂದ್ರ ಬಾಬು ಮನೆ ಮನೆ ಪ್ರಚಾರದ ವೇಳೆ ಮುಖಾಮುಖಿಯಾದಾಗ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ನೆ.ಲ.ನರೇಂದ್ರ ಬಾಬು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾದ ಬಳಿಕವೂ ಪಕ್ಷದ ಹಳೇ ಸ್ನೇಹಿತರಾದ ಯು.ಟಿ.ಖಾದರ್ ಜೊತೆ ಕೈ ಕುಲುಕಿ ಸಂತೋಷದಿಂದ ಮಾತನಾಡಿಸಿ ಮತ್ತೆ ಚುನಾವಣಾ ಪ್ರಚಾರದಲ್ಲಿ ಮುಂದುವರೆದರು.
ಪಕ್ಷದ ಮುಖಂಡರ ಈ ನಡೆ ಅಲ್ಲಿದ್ದ ಕಾರ್ಯಕರ್ತರಿಗೂ ಸಂತೋಷ ತಂದಿತು. ನಮ್ಮದು ಮಾನವೀಯತೆಯ ರಾಜಕೀಯ. ವೈರುತ್ಯದ ರಾಜಕೀಯ ಅಲ್ಲ. ಇದು ನಮ್ಮ ಪಕ್ಷ ಕಲಿಸಿಕೊಟ್ಟ ಸಿದ್ಧಾಂತ ಎಂದು ಖಾದರ್ ಹೇಳಿದರು.