ಬೆಂಗಳೂರು: ಸಂಸದ ಭಗವಂತ ಖೂಬಾ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ಬೇಸರ ಹೊರಹಾಕಿರುವ ಅವರು, ಮಾನವೀಯತೆಯೇ ಗೊತ್ತಿಲ್ಲದ ಮಾನ್ಯ ಭಗವಂತ ಖೂಬಾ ಅವರೇ, ನೀವು ಹುಟ್ಟು ಜನ ದ್ರೋಹಿ, ಅಧಿಕಾರ ದುರುಪಯೋಗ ಪಡಿಸಿಕೊಂಡು ಬಡವರಿಗೆ ಸೇರಬೇಕಾದ ಮನೆಯನ್ನು ಕಿತ್ತುಕೊಂಡವರು. ಲಕ್ಷ ಲಕ್ಷ ಬಡವರು ಕ್ರಮ ಬದ್ಧವಾಗಿ ಮಂಜೂರಾದ ಮನೆಗಳನ್ನು ಕಟ್ಟುತ್ತಿದ್ದ ವೇಳೆ ನಿರ್ಮಾಣ ಅರ್ಧಕ್ಕೆ ನಿಲ್ಲುವಂತೆ ಮಾಡಿ ಅವರನ್ನು ಬೀದಿ ಪಾಲಾಗಿಸಿದವರು ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮಿಂದ ಮೋಸಕ್ಕೊಳಗಾಗಿರುವ ಅದೇ ಬಡವರ ಮೇಲಾಣೆ, ಅವರ ಶಾಪ ನಿಮಗೆ ತಟ್ಟೇ ತಟ್ಟಲಿದೆ. ನಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿದ್ರೆ, ಒಂದು ನಯಾ ಪೈಸೆಯಷ್ಟಾದರೂ ಶಾಮೀಲಾಗಿದ್ರೆ ನನ್ನ ವಿರುದ್ದ ಕ್ರಮ ಕೈಗೊಳ್ಳಲು ನಿಮ್ಮ ಸರ್ಕಾರಕ್ಕೆ ಹೇಳಿ. ಅಂದಹಾಗೇ, ನೈತಿಕತೆಯ ಬಗ್ಗೆ ನೀವು ಮಾತನಾಡಬೇಡಿ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಸದ ಭಗವಂತ್ ಖೂಬಾ ವಿರುದ್ಧ ಬೀದರ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಖುದ್ದು ಈಶ್ವರ್ ಖಂಡ್ರೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಸೋಲನುಭವಿಸಬೇಕಾಗಿ ಬಂದಿತ್ತು. ಇದೀಗ ಸಂಸದರ ವಿರುದ್ಧ ಖಂಡ್ರೆ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಸಂಸದರ ಉತ್ತರ ನಿರೀಕ್ಷಿಸಲಾಗುತ್ತಿದೆ.