ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ಹೆಮ್ಮೆ ಮತ್ತು ಖುಷಿಯ ವಿಚಾರ ಎಂದು ನಿವೃತ್ತಿ ಹೊಂದುತ್ತಿರುವ ಐಪಿಎಸ್ ಅಧಿಕಾರಿಗಳು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಇಂದು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ನಿವೃತ್ತಿಯಾಗುತ್ತಿದ್ದಾರೆ. ಬೆಂಗಳೂರು ನಗರ ಮಾಜಿ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹಾಗೂ ಆಶಿತ್ ಮೋಹನ್ ಪ್ರಸಾದ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಕೊರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಕರ್ನಾಟಕ ಪೊಲೀಸ್ ಮಹಾನಿರ್ದೆಶಕ ಪ್ರವೀಣ್ ಸೂದ್ ಹಾಗೂ ಇತರೆ ಹಿರಿಯಾಧಿಕಾರಿಗಳು ಭಾಗಿಯಾಗಿ ಇಬ್ಬರು ಅಧಿಕಾರಿಗಳಿಗೆ ಸರ್ಕಾರಿ ಗೌರವದ ಮೂಲಕ ಬೀಳ್ಕೊಟ್ಟರು.
ನಿನ್ನೆ ತಾನೆ ಸುನೀಲ್ ಕುಮಾರ್ ಅವರಿಗೆ ಎಸಿಬಿ ಎಡಿಜಿಪಿಯಿಂದ ಸಿಐಡಿ ವಿಶೇಷ ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ನೇಮಕ ಮಾಡಲಾಗಿತ್ತು. ಹೀಗಾಗಿ ಇಂದು ಒಂದು ದಿನದ ಮಟ್ಟಿಗೆ ಸುನೀಲ್ ಕುಮಾರ್ ಸಿಐಡಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಇವರ ಜೊತೆ ಆಶಿತ್ ಮೋಹನ್ ಪ್ರಸಾದ್ ಕೂಡ ನಿವೃತ್ತಿಯಾಗಿದ್ದಾರೆ. ಪೊಲೀಸ್ ಇಲಾಖೆಯ ಡಿಜಿ ಹುದ್ದೆಗೆ ಇವರ ಹೆಸರು ಕೇಳಿ ಬಂದಿತ್ತಾದರು ಕೊನೆ ಕ್ಷಣದಲ್ಲಿ ಪ್ರವೀಣ್ ಸೂದ್ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಮಾಧ್ಯಮದವರೊಂದಿಗೆ ಸುನೀಲ್ ಕುಮಾರ್ ಮಾತನಾಡಿ, ಕರ್ನಾಟಕ ನಮಗೆ ಬಹಳ ಪ್ರೀತಿಯನ್ನು ಕೊಟ್ಟಿದೆ. ಬಹಳ ಕಡೆ ಸೇವೆ ಸಲ್ಲಿಸಿದ್ದು, ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ. ಹಾಗೆ ಐಪಿಎಸ್ ಹಿರಿಯ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ಖುಷಿಯ ವಿಚಾರ. ಎಲ್ಲಾ ಸಿಬ್ಬಂದಿ ನಮಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಈ ಇಬ್ಬರು ಸಹ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಅವರ ಜೊತೆ ಯಾವಾಗಲೂ ಬೆಂಬಲವಾಗಿ ನಾವು ಇರುತ್ತೇವೆ ಎಂದು ತಿಳಿಸಿದ್ದಾರೆ.