ಬೆಂಗಳೂರು: ಒಂಟಿ ವೃದ್ಧೆಯ ಕೈಕಾಲು ಕಟ್ಟಿ ಬರ್ಬರವಾಗಿ ಹತ್ಯೆಗೈದು, ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಶನಿವಾರ ಸಂಜೆ ಮಹಾಲಕ್ಷ್ಮಿ ಲೇಔಟಿನಲ್ಲಿ ನಡೆದಿದೆ. ಕಮಲಮ್ಮ (80) ಹತ್ಯೆಯಾದ ವೃದ್ಧೆ. ಮೃತಳ ಪತಿ ಆರು ತಿಂಗಳ ಹಿಂದೆಷ್ಟೇ ಸಾವನ್ನಪ್ಪಿದ್ದರು. ಮೂವರು ಮಕ್ಕಳಿದ್ದು, ಅವರು ಸಹ ಬೇರೆ ಬೇರೆ ಕಡೆ ವಾಸವಿದ್ದರಿಂದ ಕಮಲಮ್ಮ ಒಬ್ಬರೇ ವಾಸವಿದ್ದರು.
ನಿನ್ನೆ(ಶನಿವಾರ) ಸಂಜೆ ಮನೆ ಪ್ರವೇಶಿಸಿರುವ ಹಂತಕರು ವೃದ್ಧೆಯ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿಗೆ ಬಂದಿದ್ದ ಯುವಕ ಆತ್ಮಹತ್ಯೆಗೆ ಶರಣು: ಪೇಯಿಂಗ್ ಗೆಸ್ಟ್ ಕಟ್ಟಡವೊಂದರ ಕೊಠಡಿಯಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಮಾರೇನಹಳ್ಳಿಯಲ್ಲಿ ಶನಿವಾರ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬೀದರ್ ಮೂಲದ ಅಭಿಷೇಕ್ (19) ಆತ್ಮಹತ್ಯೆಗೆ ಶರಣಾದ ಯುವಕ. ಬಿ.ಎಸ್ಸಿ ವ್ಯಾಸಂಗ ಮಾಡಿದ್ದ ಅಭಿಷೇಕ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ.
ಕೆಲ ದಿನಗಳ ಕಾಲ ಮೈಕೊಲೇಔಟ್ ಬಳಿ ಇರುವ ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ನಂತರ ವಿಜಯನಗರ ಬಳಿಯ ಮಾರೇನಹಳ್ಳಿಯ ಪಿ.ಜಿ.ಗೆ ಶಿಫ್ಟ್ ಆಗಿದ್ದ. ನಿನ್ನೆ ಬೆಳಗ್ಗೆ ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅಭಿಷೇಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸಹ ತಿಳಿದುಬಂದಿಲ್ಲ. ಮೃತನ ಪೋಷಕರಿಗೆ ಪೊಲೀಸರು ಮಾಹಿತಿ ರವಾನಿಸಿದ್ದು, ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಗೋವಿಂದರಾಜನಗರ ಠಾಣೆಯಲ್ಲಿ ದಾಖಲಾಗಿದೆ.
ಟೆಕ್ಕಿಯ ಮೇಲೆ ಆಟೋ ಹರಿಸಲು ಯತ್ನಿಸಿದ ಆಟೋ ಚಾಲಕ: ಮೇ 25 ರಂದು ನಸುಕಿನ 3.30ಕ್ಕೆ ಸುಮಾರಿಗೆ ಹೆಚ್ಎಸ್ಆರ್ ಲೇಔಟ್ನ ಸೆಕ್ಟರ್ 1 ರಲ್ಲಿ ಟೆಕ್ಕಿಯೊಬ್ಬ ಆಟೋ ಬಳಿ ತಾನು ಹೋಗಬೇಕಾಗಿದ್ದ ಜಾಗಕ್ಕೆ ತಗುಲುವ ದರವನ್ನು ಕೇಳಿದ್ದಾನೆ. ಆ ದರ ದುಬಾರಿಯಾಗಿದ್ದ ಕಾರಣ ಅಷ್ಟು ಹಣ ನೀಡಲು ಟೆಕ್ಕಿ ನಿರಾಕರಿಸಿ ರ‍್ಯಾಪಿಡೋ ದ್ವಿಚಕ್ರ ವಾಹನ ಬುಕ್ ಮಾಡಲು ನಿರ್ಧರಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಆಟೋ ಚಾಲಕ ರ‍್ಯಾಪಿಡೋ ಬುಕ್ ಮಾಡುವುದನ್ನು ಗಮನಿಸಿ, ಕೋಪಗೊಂಡು ಏಕಾಏಕಿ ಟೆಕ್ಕಿಯ ಮೇಲೆ ಆಟೋ ನುಗ್ಗಿಸಿದ್ದಾನೆ. ಆಟೋ ಡಿಕ್ಕಿಯಾದ ರಭಸಕ್ಕೆ ಟೆಕ್ಕಿ ರಸ್ತೆ ಬದಿಯಲ್ಲಿ ಬಿದ್ದು ಗಾಯಗೊಂಡಿದ್ದಾನೆ. ಚಾಲಕನ ಗೂಂಡಾ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದಾಗ ಸತ್ಯ ಬಹಿರಂಗ!