ಬೆಂಗಳೂರು: ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ಕೋವಿಡ್ನಿಂದ ಸತ್ತವರ ಸಂಖ್ಯೆ ಸೋಮವಾರ ಶೂನ್ಯಕ್ಕೆ ಇಳಿದಿದೆ. ಆದರೆ, ನಿನ್ನೆ ಮತ್ತೆ 11 ಕ್ಕೆ ಏರಿಕೆಯಾಗಿತ್ತು. ಆದರೆ ಆಗಸ್ಟ್ ತಿಂಗಳು ಪೂರ್ತಿ 10 ಕ್ಕಿಂತ ಕಡಿಮೆ ಸಂಖ್ಯೆಯಲ್ಲೇ ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಮರಣದ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಸದ್ಯ ಕೋವಿಡ್ ಮರಣ ಪ್ರಮಾಣ ನಗರದಲ್ಲಿ 0.91ರಷ್ಟಿದೆ.
ಏಪ್ರಿಲ್ ಆರಂಭದಲ್ಲಿ ಕೋವಿಡ್ನಿಂದ ಸತ್ತವರ ಪ್ರಮಾಣ ಶೇ.0.37 ಗೆ ಇಳಿಕೆಯಾಗಿತ್ತು. ನಂತರ ಜೂನ್ ತಿಂಗಳಲ್ಲಿ ಶೇ.7.41 ಗೆ ಏರಿಕೆಯಾಗಿತ್ತು. ಸ್ಮಶಾನಗಳ ಮುಂದೆ ಶವಗಳ ಕ್ಯೂ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸೋಮವಾರ ಕೋವಿಡ್ ಸಾವು ಸೊನ್ನೆಯಾಗಿದ್ದು, ನಗರವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಈವರೆಗೆ ಕೊರೊನಾದಿಂದ 15,971 ಮಂದಿ ಮೃತಪಟ್ಟಿದ್ದಾರೆ. 2020 ಜೂನ್ 5 ಮತ್ತು 2021 ಜನವರಿ 10 ರಂದು ಕೋವಿಡ್ನಿಂದ ಒಂದೂ ಸಾವು ಸಂಭವಿಸಿರಲಿಲ್ಲ.
ನಗರದಲ್ಲಿ ಕೋವಿಡ್ ಮರಣ ಸಂಖ್ಯೆ ಅತಿ ಕಡಿಮೆ:
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಿ.ರಂದೀಪ್ ಮಾತನಾಡಿ, ನಗರದಲ್ಲಿ ಕೋವಿಡ್ ಮರಣ ಸಂಖ್ಯೆ ಅತಿ ಕಡಿಮೆ ಆಗಿದೆ. ನಗರದಲ್ಲಿ ಸಾಕಷ್ಟು ಆಸ್ಪತ್ರೆ ಬೆಡ್ಗಳೂ ಲಭ್ಯ ಇವೆ. ಅಲ್ಲದೇ ಕೋವಿಡ್ ಕೇಸ್ ಪತ್ತೆ ಆದ ಕೂಡಲೇ ರೋಗಿಯ ಮನೆಗೆ ವೈದ್ಯರ ತಂಡ ಹೋಗಿ ಫಿಜಿಕಲ್ ಟ್ರಯಾಜ್ ಮಾಡಿ, ಆರೋಗ್ಯ ಪರಿಸ್ಥಿತಿ ಪರಿಶೀಲಿಸಲಾಗ್ತಿದೆ. ಹೀಗಾಗಿ ಸೋಂಕಿತರ ಆರೋಗ್ಯ ಹದಗೆಡುವ ಮೊದಲೇ ಚಿಕಿತ್ಸೆ ನೀಡುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವುದರಿಂದ ಬೇಗ ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯ ಬಳಿಕ ಬೆಂಗಳೂರಿನಲ್ಲೆ ಅತಿಹೆಚ್ಚು ಲಸಿಕೆ:
ಐಸಿಯು ಸೇರ್ಪಡೆ ಕೂಡಾ ಬಹಳಷ್ಟು ಕಡಿಮೆ ಇದೆ. ಇದಲ್ಲದೇ ಕಂಟೇನ್ಮೆಂಟ್ ಝೋನ್ಗಳು, ಮಾಸ್ಕ್ ಕಡ್ಡಾಯ ನಿಯಮ ಕಟ್ಟುನಿಟ್ಟಾಗಿ ಮುಂದುವರಿಸಲಾಗುವುದು. ಲಸಿಕೆ ವಿತರಣೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದ್ದು, ದೆಹಲಿಯ ಬಳಿಕ ಬೆಂಗಳೂರಿನಲ್ಲೆ ಅತಿಹೆಚ್ಚು ಲಸಿಕೆ ನೀಡಲಾಗುತ್ತಿದ್ದು, ನಿನ್ನೆ ಒಂದೇ ದಿನ 1 ಲಕ್ಷ ಡೋಸ್ ಲಸಿಕೆ ರಾಜ್ಯ ಸರ್ಕಾರ ಪೂರೈಕೆ ಮಾಡಿದೆ. ಮುಂದಿನ ಎರಡು ದಿನದಲ್ಲಿ ಈ ಲಸಿಕೆ ಬಳಕೆ ಮಾಡಲಾಗುವುದು ಎಂದರು.
ಒಂದು ಲಕ್ಷ ಮನೆಗಳನ್ನು ತಲುಪಿದ ಮನೆ ಮನೆ ಸರ್ವೆ:
ಮನೆ ಬಾಗಿಲಿಗೆ ಕಾರ್ಪೊರೇಷನ್ ವೈದ್ಯರು ಎಂಬ ಹೆಲ್ತ್ ಸರ್ವೆ ಆರಂಭವಾಗಿದ್ದು, ಈಗಾಗಲೇ ಒಂದು ಲಕ್ಷ ಮನೆಗಳನ್ನು ತಲುಪಿ ಮನೆಮಂದಿಯ ಆರೋಗ್ಯ ಪರಿಸ್ಥಿತಿಯನ್ನು ದಾಖಲಿಸಲಾಗಿದೆ. 54 ವಾರ್ಡ್ಗಳಲ್ಲಿ 7 ತಂಡಗಳು ಪ್ರಾಯೋಗಿಕವಾಗಿ ಕೆಲಸ ಮಾಡುತ್ತಿದೆ. ಡಿಜಿಟಲ್ ಟೂಲ್ ಮೂಲಕ ಆರೋಗ್ಯ ಪರಿಸ್ಥಿತಿಯ ಸಮೀಕ್ಷೆ ವರದಿಯಾಗುತ್ತಿದ್ದು, ಏನಾದರೂ ಸಮಸ್ಯೆ ಆದ ಕೂಡಲೇ ಪಾಲಿಕೆ ತಂಡ ಜನರ ಮನೆಬಾಗಿಲಿಗೆ ತಲುಪಲಿದೆ ಎಂದರು.
5 ಸಾವಿರ ಸಕ್ರಿಯ ಪ್ರಕರಣಗಳು!:
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ 7,582 ಇದೆ. ಆದರೆ, ಇವೆಲ್ಲವೂ ಸಕ್ರಿಯ ಪ್ರಕರಣಗಳಲ್ಲ. ಬಹುತೇಕ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ನಾಲ್ಕು ದಿನಗಳ ಬಳಿಕ ಪಾಲಿಕೆ ಸಂಪರ್ಕದಿಂದ ತಪ್ಪಿಸಿಕೊಳ್ಳುತ್ತಾರೆ. ಬೇರೆ ಊರಿಗೆ ಪ್ರಯಾಣಿಸಿ ಅಥವಾ ಫೋನ್ ನಾಟ್ ರೀಚೇಬಲ್ ಆಗುತ್ತಿದ್ದಾರೆ. ಹೀಗಾಗಿ ಇದನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಅವರು ಪತ್ತೆ ಹಚ್ಚಿದ ಕೂಡಲೇ ಗುಣಮುಖರಾದ ಪಟ್ಟಿಗೆ ಸೇರಿಸಲಾಗುವುದು. ಹಳೆಯ ಬಾಕಿ ಇರುವ ಮರಣವಾಗಿರುವ ಪ್ರಕರಣಗಳನ್ನೂ ಸೇರ್ಪಡೆ ಮಾಡಲಾಗುವುದು. ಅದನ್ನೂ ತೆಗೆದರೆ, ಸಕ್ರಿಯ ಪ್ರಕರಣಗಳು ಐದು ಸಾವಿರ ಇರಬಹುದು ಅಷ್ಟೇ ಎಂದರು.
ಹೊಸ ಕೋವಿಡ್ ರೂಪಾಂತರಿ ತಳಿ ಪತ್ತೆಯಾದರೆ ಮೂರನೇ ಅಲೆ:
ಕೋವಿಡ್ ತಾಂತ್ರಿಕ ಸಮಿತಿಯ ಪ್ರಕಾರ, ಕೋವಿಡ್ ಹೊಸ ವೇರಿಯಂಟ್ಗಳು ಪತ್ತೆಯಾದರೆ ಬೆಂಗಳೂರಿನಲ್ಲಿ ಮೂರನೇ ಅಲೆ ಆರಂಭವಾಗುವ ಸಾಧ್ಯತೆ ಇದೆ. ಸದ್ಯ ಇರುವ ಎಲ್ಲ ತಳಿಗಳು ಡೆಲ್ಟಾ, ಹಾಗೂ ಕಾಪಾ ರೂಪಾಂತರಿ ತಳಿ ಮಾತ್ರ ಇದೆ. ಡೆಲ್ಟಾ ಪ್ಲಸ್ ಕೂಡಾ ಕೇವಲ 3 ಕಡೆ ಕಂಡುಬಂದಿದೆ. ಹೀಗಾಗಿ ಇದರಿಂದ ಮೂರನೇ ಅಲೆ ಹಬ್ಬುವ ಸಾಧ್ಯತೆ ಕಡಿಮೆ ಇದೆ. ಆದರೆ ಎರಡನೇ ಅಲೆ ಕಡಿಮೆಯಾಗುವ ವೇಳೆಗೆ, ಎಲ್ಲಾದರೂ ಹೊಸ ವೇರಿಯೆಂಟ್ ಕಂಡು ಬಂದರೆ ಮತ್ತೆ ಏರಿಕೆಯಾಗಬಹುದು ಎಂದರು.
ಹೀಗಾಗಿ ಕಂಟೇನ್ಮೆಂಟ್, ಕೋವಿಡ್ ಟೆಸ್ಟಿಂಗ್, ಆಸ್ಪತ್ರೆಗಳಲ್ಲಿ ಹಾಸಿಗೆ ಸಿದ್ಧತೆ ಎಲ್ಲವನ್ನೂ ಸಿದ್ಧವಾಗಿಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹೊಸ ವೇರಿಯೆಂಟ್ ಪತ್ತೆಗೆ ನಿತ್ಯ 250 ಪಾಸಿಟಿವ್ ಸೋಂಕಿತರ ಸ್ಯಾಂಪಲ್ಗಳನ್ನು ಲ್ಯಾಬ್ಗೆ ಕಳುಹಿಸಲಾಗುತ್ತಿದೆ. ಈ ಪೈಕಿ 180 ಪ್ರಕರಣಗಳು ಕೂಡಾ ಡೆಲ್ಟಾ ವೇರಿಯೆಂಟ್ ಆಗಿದೆ. ಸೀರೋ ಸರ್ವೆ ಕೂಡಾ ಒಂದು ವಾರದಲ್ಲಿ ಮಧ್ಯಂತರ ವರದಿ ಪಾಲಿಕೆಗೆ ಸಿಗಲಿದೆ ಎಂದರು.
ಮಕ್ಕಳಲ್ಲಿ ಕೋವಿಡ್ ಹೆಚ್ಚಳವಾಗಿರುವ ಲಕ್ಷಣ ಕೂಡಾ ಇಲ್ಲ. 9-10 ಪ್ರಕರಣಗಳಲ್ಲಿ ಮಾತ್ರ ಮಕ್ಕಳು ಆಸ್ಪತ್ರೆ ಸೇರುತ್ತಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರ ಆಗುತ್ತಿಲ್ಲ. ಈ ಬಗ್ಗೆ ಪೋಷಕರಿಗೂ ಹೆಚ್ಚು ಅರಿವು ಮೂಡಿಸಲಾಗಿದೆ ಎಂದರು.
ಓದಿ: ರಾಜ್ಯದಲ್ಲಿ 1,224 ಮಂದಿಗೆ ಕೋವಿಡ್ ಪಾಸಿಟಿವ್ : 22 ಸೋಂಕಿತರು ಬಲಿ