ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸುರಕ್ಷಿತ, ಆರೋಗ್ಯಕರ ಮತ್ತು ಹೆಚ್ಚು ನ್ಯಾಯಸಮ್ಮತ ನಗರಕ್ಕಾಗಿ ಪಾಲಿಕೆ ಮಾರ್ಗಸೂಚಿ ರಚಿಸುತ್ತಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಲ್ಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ ಇಂಡಿಯಾ ಪ್ರಸ್ತುತ ಪಡಿಸಿರುವ ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, 2050ರ ವೇಳೆಗೆ ತಟಸ್ಥ ಇಂಗಾಲ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ ಹೊಂದುವ ಗುರಿಯೊಂದಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಹೆಚ್ಚು ನ್ಯಾಯಸಮ್ಮತ ನಗರಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾರ್ಗಸೂಚಿ ರಚಿಸುತ್ತಿದೆ ಎಂದರು.
![World Resource Institute India programme](https://etvbharatimages.akamaized.net/etvbharat/prod-images/27-11-2023/20127452_thumbnailmeg.jpg)
2050ರ ವೇಳೆಗೆ ತಟಸ್ಥ ಇಂಗಾಲ ಸಾಧಿಸುವ ದೃಷ್ಟಿಯಿಂದ ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಬೆಂಗಳೂರು ವಿಶ್ವದಲ್ಲಿನ ಕೆಲವೇ ಸ್ವಚ್ಛ ನಗರಗಳಲ್ಲಿ ಒಂದಾಗಿ ಇರುವಂತೆ ಮತ್ತು ಜಾಗತಿಕ ಗುಣಮಟ್ಟದ ಹವಾಮಾನ ಕ್ರಿಯಾ ಯೋಜನೆ ಹೊಂದಿರುವ ಭಾರತದ ಮೂರನೇ ನಗರವಾಗಿರುವಂತೆ ಮಾಡಿದೆ ಎಂದು ತಿಳಿಸಿದರು.
ನಗರಗಳ ಬದ್ಧತೆಯ ಭಾಗವಾಗಿ, ಬೆಂಗಳೂರು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಆರೋಗ್ಯಕರ, ನ್ಯಾಯಸಮ್ಮತ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಸಮುದಾಯಗಳನ್ನು ನಿರ್ಮಿಸುವ ಗುರಿಯೊಂದಿಗೆ ಡೇಟಾ - ಚಾಲಿತ, ಎಲ್ಲವನ್ನೂ ಒಳಗೊಂಡಿರುವ ಮತ್ತು ಸಹಯೋಗದ ಹವಾಮಾನ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದೆ ಎಂದು ಮಾಹಿತಿ ನೀಡಿದರು.
![World Resource Institute India programme](https://etvbharatimages.akamaized.net/etvbharat/prod-images/27-11-2023/20127452_thumbnaileg.jpg)
ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ನೀರು, ತ್ಯಾಜ್ಯ ನೀರು ಮತ್ತು ಮಳೆ ನೀರು, ಗಾಳಿಯ ಗುಣಮಟ್ಟ, ನಗರ ಯೋಜನೆ, ಹಸಿರೀಕರಣ ಮತ್ತು ಜೀವವೈವಿಧ್ಯ, ಮತ್ತು ವಿಪತ್ತು ಮತ್ತು ನಿರ್ವಹಣೆ - ಹೀಗೆ ಏಳು ಪ್ರಮುಖ ಕ್ಷೇತ್ರಗಳಲ್ಲಿ ಬಿಬಿಎಂಪಿ ವಿಶೇಷ ಕಾಳಜಿ ವಹಿಸಿದೆ ಎಂದರು.
![World Resource Institute India programme](https://etvbharatimages.akamaized.net/etvbharat/prod-images/27-11-2023/20127452_thumbnailg.jpg)
ಈ ಸಂದರ್ಭದಲ್ಲಿ ಹವಾಮಾನ ಪರಿಣಾಮಗಳನ್ನು ತಡೆಯಲು ಪ್ರತಿಜ್ಞೆ ಸ್ವೀಕಾರ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗಿರಿನಗರದ ಶಾಂತಿನಿಕೇತನ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಲಯ ಆಯುಕ್ತ ಡಾ. ಆರ್.ಎಲ್ ದೀಪಕ್, ಸ್ನೇಹಲ್, ವಿನೋತ್ ಪ್ರಿಯಾ, ವಲಯ ಜಂಟಿ ಆಯುಕ್ತೆ ಪಲ್ಲವಿ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಹಾಗೂ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಪುನೀತ್ ಹೆಸರಿಡುವಂತೆ ಬಿಬಿಎಂಪಿಗೆ ರಾಜ್ಯ ಸರ್ಕಾರದ ಸೂಚನೆ