ಬೆಂಗಳೂರು: ಬೆಂಗಳೂರು ನಗರ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಭಾರೀ ಆಸ್ತಿ ಘೊಷಣೆ ಮಾಡಿದ್ದಾರೆ. 34.68 ಕೋಟಿ ರೂ ಸ್ಥಿರಾಸ್ತಿ ಹಾಗು 1.95 ಕೋಟಿ ರೂ ಮೌಲ್ಯದ ಚರಾಸ್ತಿಯನ್ನು ರೆಡ್ಡಿ ಹೊಂದಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನದಂದು ಉಮೇದುವಾರಿಕೆ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ, ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರಗಳ ಅಫಿಡವಿಟ್ ಸಲ್ಲಿಸಿದ್ದಾರೆ. ಅದರಂತೆ ಗೋಪಿನಾಥ್ ರೆಡ್ಡಿ ಪ್ರಸಕ್ತ ವರ್ಷದ ವಾರ್ಷಿಕ ಆದಾಯ 44,660 ರೂ.ಗಳಾಗಿದ್ದು, ಪತ್ನಿ ಎಸ್ ಕೆ ಗಾಯತ್ರಿ ವಾರ್ಷಿಕ ಆದಾಯ 13,26,870 ರೂ.ಗಳಾಗಿದೆ.ಕೈಯಲ್ಲಿರುವ ನಗದು 3.25 ಲಕ್ಷ ರೂ.ಗಳಾಗಿದ್ದು, ಗೋಪಿನಾಥ್ ರೆಡ್ಡಿ ಬ್ಯಾಂಕ್ ಖಾತೆಯಲ್ಲಿ 39,66,563 ರೂ.ಹಣವಿದೆ. ಪತ್ನಿ ಬ್ಯಾಂಕ್ ಖಾತೆಯಲ್ಲಿ 26,61,266 ರೂ. ಹಣವಿದೆ.ಅವಿಭಜಿತ ಕುಟುಂಬದ ಹೆಸರಿನಲ್ಲಿ 98,84,663 ರೂ ಹಣ ಬ್ಯಾಂಕ್ ನಲ್ಲಿದೆ.
82.50 ಲಕ್ಷ ರೂ ಸಾಲ ಇದೆ ಎಂದು ತೋರಿಸಿರುವ ಗೋಪಿನಾಥ್ ರೆಡ್ಡಿ, ಪತ್ನಿಯ ಹೆಸರಿನಲ್ಲಿ 1.29 ಕೋಟಿ ರೂ ಸಾಲ ತೋರಿಸಿದ್ದಾರೆ.ಅವಿಭಜಿತ ಕುಟುಂಬದ ಹೆಸರಿನಲ್ಲಿ 39.90 ಲಕ್ಷ ರೂ ಸಾಲವಿದೆ.
ಒಟ್ಟು 43 ಲಕ್ಷ ರೂ ಮೌಲ್ಯದ ಮೂರು ವಾಹನಗಳಿದ್ದು, ಒಂದು ಕಿಯಾ ಕಾರ್ನಿವಲ್ ಕಾರು, ಎರಡು ಟ್ರಾಕ್ಟರ್ ಗಳನ್ನು ಗೋಪಿನಾಥ್ ರೆಡ್ಡಿ ಹೊಂದಿದ್ದಾರೆ. ತಮ್ಮ ಬಳಿ 23.85 ಲಕ್ಷ ರೂ ಮೊತ್ತದ 530 ಗ್ರಾಂ ಚಿನ್ನ, 13 ಸಾವಿರ ಮೌಲ್ಯದ 230 ಗ್ರಾಂ ಬೆಳ್ಳಿ, ಪತ್ನಿ ಬಳಿ 47.25 ಲಕ್ಷ ರ ಮೌಲ್ಯದ 1050 ಗ್ರಾಂ ಚಿನ್ನ, 6.70 ಲಕ್ಷ ಮೌಲ್ಯದ 10 ಕೆಜಿ ಬೆಳ್ಳಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಗೋಪಿನಾಥ್ ರೆಡ್ಡಿ ಬಳಿ ಇರುವ ಒಟ್ಟು ಚರಾಸ್ತಿ ಮೌಲ್ಯ 1.95 ಕೋಟಿ ರೂ.ಗಳಷ್ಟಿದ್ದು,ಪತ್ನಿ ಬಳಿ 2.11 ಕೋಟಿ ರೂ ಚರಾಸ್ತಿ ಅವಿಭಜಿತ ಕುಟುಂಬದ ಬಳಿ 1.38 ಕೋಟಿ ರೂ. ಚರಾಸ್ತಿ ಇದೆ ಎಂದು ತೋರಿಸಲಾಗಿದೆ. ಒಟ್ಟು 34.68 ಕೋಟಿ ರೂ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿರಿವ ಗೋಪಿನಾಥ್ ರೆಡ್ಡಿ. ಹಾಗೆ ಯಾವುದೇ ಪೊಲಿಸ್ ದೂರುಗಳಿಲ್ಲ ಎಂದು ಅಫಿಡವಿಟ್ನಲ್ಲಿ ಉಲ್ಲೇಖ ಮಾಡಿದ್ದಾರೆ.