ಬೆಂಗಳೂರು: ನಗರ ತಜ್ಞರ ಸಲಹೆ ಪಡೆದು ಬೆಂಗಳೂರು-2050 ವಿಷನ್ ಡಾಕ್ಯುಮೆಂಟ್ ರಚಿಸಿ ಅದರಂತೆ ಯೋಜನೆಗಳ ಅನುಷ್ಠಾನ ಮಾಡಿ ಅಂತರಾಷ್ಟ್ರೀಯ ನಗರ ಬೆಂಗಳೂರನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನೂತನ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಅನಿಲ್ ಕುಮಾರ್ ವರ್ಗವಾದ ಬಳಿಕ ಇಂದು ಅಧಿಕೃತವಾಗಿ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ರು. ಹೊಸ ಆಯುಕ್ತರಿಗೆ ಬೆಳ್ಳಿ ಬ್ಯಾಟ್ ನೀಡಿ ಮಂಜುನಾಥ್ ಪ್ರಸಾದ್ ಅಧಿಕಾರ ಹಸ್ತಾಂತರಿಸಿದರು.
ನೂತನ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಸ್ವಚ್ಚ, ಪಾರದರ್ಶಕ, ಜವಾಬ್ದಾರಿಯುತವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ರು.
ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ನಗರ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ ಸಲಹೆ ಪಡೆದು ಪರಿಸರ, ನೀರು ಪೂರೈಕೆ, ಸಾರಿಗೆ ಹಾಗೂ ಕಸ ನಿರ್ವಹಣೆ ಕುರಿತ ಮುಂದಿನ 20 ರಿಂದ 30 ವರ್ಷಗಳ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ರು.
ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂದಿರಾ ಕ್ಯಾಂಟೀನ್ಗೆ ಬೇಕಾದ ಶೇಕಡಾ 50 ರಷ್ಟಾದರೂ ಹಣ ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಹಣಕಾಸು ಇಲಾಖೆಗೆ ಮನವಿ ಮಾಡಿದೆ. ಅಲ್ಲದೇ ಇಂದಿರಾ ಕ್ಯಾಂಟೀನ್, ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಕುರಿತು ತನಿಖೆಗೆ ಸಮಿತಿ ರಚನೆಯಾಗಿದ್ದು, ವರದಿಯಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಸಹಿಸುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ತ್ಯಾಜ್ಯ ನಿರ್ವಹಣೆ, ಕೆರೆಗಳ ಪುನಶ್ಚೇತನ, ನೀರು ಸರಬರಾಜು ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಮ್ ವಿಜಯ್ ಭಾಸ್ಕರ್ ನೇತೃತ್ವದಲ್ಲಿ ಎಲ್ಲಾ ಸ್ಥಳೀಯ ಇಲಾಖೆಗಳ ಸಮನ್ವಯ ಸಮಿತಿ ಇದೆ. ಇದರ ಸಭೆಗಳ ತೀರ್ಮಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂಬ ಭರವಸೆ ನೀಡಿದ್ರು.
ಇನ್ನು ಜಾಹೀರಾತು ಬೈಲಾದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ನಗರದಲ್ಲಿ ಒಂದು ವರ್ಷ ನಿಷೇಧವಿದೆ. ಆದರೆ ಇದಕ್ಕೆ ಸಾಕಷ್ಟು ಜನರ ವಿರೋಧವೂ ಇದೆ. ಹೀಗಾಗಿ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನುವ ಮೂಲಕ ಜಾಹೀರಾತು ಅಳವಡಿಕೆಗೆ ಮತ್ತೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಬಗ್ಗೆ ಸುಳಿವು ಕೊಟ್ಟರು.
ಇದೇ ವೇಳೆ ಮಾತನಾಡಿದ, ನಿರ್ಗಮಿತ ಆಯುಕ್ತ ಮಂಜುನಾಥ್ ಪ್ರಸಾದ್, ನಗರದ ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಅದಕ್ಕೆ ತಕ್ಕ ನಗರದ ಬೆಳವಣಿಗೆಯಾಗಬೇಕು ಎಂದು ಕಿವಿಮಾತು ಹೇಳಿದ್ರು.