ಬೆಂಗಳೂರು: ಕಳೆದ ವರ್ಷದಿಂದ ಶಾಸಕರಿಗೆ ಸರಿಯಾಗಿ ಅನುದಾನ ಬರುತ್ತಿಲ್ಲ ಎಂದು ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶಂಪೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಬಿಜೆಪಿ ಶಾಸಕರೇ ಅನುದಾನ ಬರುತ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಬಿಜೆಪಿ ಶಾಸಕರೂ ಹರಿಹಾಯುತ್ತಿದ್ದಾರೆ. ಸರ್ಕಾರ ಎಲ್ಲದಕ್ಕೂ ಕೊರೊನಾ ನೆಪ ಹೇಳುತ್ತಿದೆ. ನಾವು ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದರು.
ಕೆಟ್ಟ ಸರ್ಕಾರವೆಂದು ಹದಿನೇಳು ಜನರನ್ನು ತಮ್ಮ ಕಡೆ ಸೆಳೆದು ಮೈತ್ರಿ ಸರ್ಕಾರವನ್ನು ಬೀಳಿಸಿದರು. ಈಗ ಒಳ್ಳೆಯ ಸರ್ಕಾರ ಬಂದಿದ್ರೆ ಕೆಲಸ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಸಚಿವ ಎಂಟಿಬಿ ನಾಗರಾಜ್ ಮಧ್ಯಪ್ರವೇಶಿಸಿ, "ಅಭಿವೃದ್ಧಿ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ಶಾಸಕರು ಮಾರಾಟವಾಗಿದ್ದಾರೆ ಎಂದು ಹೇಳುವುದು ಶೋಭೆ ತರುವುದಿಲ್ಲ" ಎಂದರು. ಆ ವೇಳೆ ಕಾಶಂಪೂರ ಹಾಗೂ ನಾಗರಾಜ್ ಮಧ್ಯೆ ಮಾತಿನ ವಾಗ್ಯುದ್ಧ ನಡೆಯಿತು. ನಂತರ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ನಿಮ್ಮ (ಜೆಡಿಎಸ್) ಬಗ್ಗೆ ಮಾತನಾಡಲು ಒಂದು ವರ್ಷ ಬೇಕು ಎಂದು ಮಾತಿನಲ್ಲಿ ಚುಚ್ಚಿದರು.
ಬಳಿಕ ಬಂಡೆಪ್ಪ ಕಾಶಂಪೂರ ಮಾತನಾಡಿ, ಒಳ್ಳೆಯ ಸರ್ಕಾರ ಬರಲಿ ಎಂದು ಬೇಸಿಕ್ ಆಗಿ ಹೇಳಿದೆ ಅಷ್ಟೆ ಎಂದು ಸಮಜಾಯಿಷಿ ನೀಡಿದರು.
ಇದಕ್ಕೂ ಮುನ್ನ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ, ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡಬೇಕು. ಜಿಲ್ಲೆಯಲ್ಲಿ ಆಲಮಟ್ಟಿ ಡ್ಯಾಂ ಕಟ್ಟಿದ ಸಂದರ್ಭದಲ್ಲಿ ಮುಳುಗಿರುವ ಹಳ್ಳಿಗಳ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬೇರೆ ಕಡೆ ಸ್ಥಳಾಂತರ ಮಾಡಿ ಮನೆ ಕೊಟ್ಟರು. ಆದರೆ ಅವರ ಕೃಷಿ ಜಮೀನು ದೂರ ಇದೆ ಅಂತ ಅಲ್ಲಿಗೆ ಹೋಗುತ್ತಿಲ್ಲ. ಅವರು ಇರುವ ಊರುಗಳಲ್ಲಿ ಅಂಗನವಾಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲ ಎಂದು ಹೇಳಿದರು.
ಜನಸಾಮಾನ್ಯರಿಗೆ ತೊಂದರೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ತೊಂದರೆ ಆಗಿದೆ ಎಂದ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ನ್ಯಾಮಗೌಡರ ಕಾಲದಲ್ಲಿ ಪೂರ್ತಿ ಆಗಬೇಕಿದ್ದ ರೈಲ್ವೆ ಕಾಮಗಾರಿ ಪೂರ್ಣವಾಗಿಲ್ಲ. ಕೇಂದ್ರ ಸಚಿವರಾಗಿದ್ದಾಗ ಅವರ ಕನಸು ಸಹ ಆಗಿತ್ತು. ಹೀಗಾಗಿ ಈ ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.