ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಸಮುದಾಯದ ಮುಖಂಡರು ಇಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕುರಿತು ಮಾತುಕತೆ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಶಾಸಕರಾದ ಶಿವಶಂಕರ ರೆಡ್ಡಿ, ಸುಬ್ಬಾರೆಡ್ಡಿ, ಮಾಜಿ ಶಾಸಕ ಸಂಪಂಗಿ ಮತ್ತಿತರರು ಹಾಜರಿದ್ದರು.
ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ಅಭಿಪ್ರಾಯ ಕೇಳಿದ್ದೇನೆ. ಕಳೆದ ತಿಂಗಳು ಅಭಿಮಾನಿಗಳ ಸಭೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಸೀತಾರಾಂ ಮಾಡಿದ್ರು. ನನಗೂ ಸಭೆ ಬಗ್ಗೆ ಗೊತ್ತಾಯ್ತು. ನಾನು ಸೀತಾರಾಂ ಅವರನ್ನು ಕರೆದು ಮಾತನಾಡಿದ್ದೆ. ಯಾಕೆ ಸಭೆ ಮಾಡ್ತಾ ಇದ್ದೀರ, ರಾಂಗ್ ಮೆಸೇಜ್ ಹೋಗುತ್ತೆ. ಇಲ್ಲ ಸಭೆ ಕರೆದಿದ್ದೇನೆ. ನಿಮ್ಮ ಜೊತೆ ಮಾತನಾಡಿ ಎಲ್ಲ ತೀರ್ಮಾನ ಮಾಡ್ತೇನೆ ಎಂದರು.
ಅವರು ಎರಡು ಬಾರಿ ಪರಿಷತ್ ಸದಸ್ಯ ಆಗಿದ್ರು. ಈ ಬಾರಿ ಅವರಿಗೆ ಟಿಕೆಟ್ ಕೊಡಬೇಕಿತ್ತು. ಬಹಳಷ್ಟು ಜಾತಿಯವರಿಗೆ ಬಲ ಇಲ್ಲ, ಅವರಿಗೂ ಟಿಕೆಟ್ ಕೊಡಬೇಕು. ಕಾಂಗ್ರೆಸ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ಪಕ್ಷ. ನಾನು ಸಿಎಂ ಆದಾಗ ಸೀತಾರಾಂ ಅವರನ್ನು ಮಂತ್ರಿ ಮಾಡಿದ್ದೆ. ವಿಧಾನ ಪರಿಷತ್ನಲ್ಲಿ ಸಭಾ ನಾಯಕರು ಆಗಿದ್ರು. 2018 ಮಲ್ಲೇಶ್ವರದಲ್ಲಿ ಟಿಕೆಟ್ ನೀಡಲಾಗಿತ್ತು. ಸೀತಾರಾಂ ನಿಲ್ಲಲ್ಲ ಅಂತ ಹೇಳಿಬಿಟ್ಟರು. ಹಾಗಾಗಿ ಬೇರೆಯವರಿಗೆ ಟಿಕೆಟ್ ಕೊಟ್ರು ಎಂದರು.
ಸೀತಾರಾಂಗೆ ಪರಿಷತ್ ಟಿಕೆಟ್ ಕೊಟ್ಟಿಲ್ಲ ಅಂತ ಬೇಜಾರು ಇದೆ: ಅವರಿಗೆ ಎರಡು ಬಾರಿ ಪರಿಷತ್ ಸ್ಥಾನ ನೀಡಲು ಪ್ರಯತ್ನ ಮಾಡಿದ್ದೆವು. ಈ ಬಾರಿ ಕೂಡ ಸಾಕಷ್ಟು ಪ್ರಯತ್ನ ಮಾಡಿದ್ವಿ. ನಾಗರಾಜ್ ಯಾದವ್ ಮತ್ತು ಜಬ್ಬಾರ್ಗೆ ಪರಿಷತ್ ಟಿಕೆಟ್ ಕೊಟ್ವಿ. ಒಂದು ಯಾದವ, ಮತ್ತೊಂದು ಮುಸ್ಲಿಂ ಸಮುದಾಯ. ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಅಂತ ಸೀತಾರಾಂ ತಲೆಯಲ್ಲಿ ಇದೆ. ಮತ್ತೆ ಮೊನ್ನೆ ಸೀತಾರಾಂ ಕರೆದು ಮಾತನಾಡಿದ್ದೆ. ಯಾವುದೇ ಕಾರಣಕ್ಕೆ ಕಾಂಗ್ರೆಸ್ ಬಿಡಬೇಡ. ನಿನಗೆ ಎಂಎಲ್ ಎ, ಲೋಕಸಭಾ, ಯಾವುದಾದರೂ ಟಿಕೆಟ್ ನೀಡೋಣ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯರನ್ನು ನಿಲ್ಲಿಸಲು ಹೇಳಿದ್ದೇನೆ. ರಕ್ಷಾ ರಾಮಯ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಆಗಲು ಸಹಾಯ ಮಾಡಿದ್ದೆ. ಈಗ ನ್ಯಾಷನಲ್ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಆದ್ರೆ ಸೀತಾರಾಂಗೆ ಪರಿಷತ್ ಟಿಕೆಟ್ ಕೊಟ್ಟಿಲ್ಲ ಅಂತ ಬೇಜಾರು ಇದೆ ಎಂದರು.
ಬಲಿಜ ಜನಾಂಗ ಕಾಂಗ್ರೆಸ್ ಜೊತೆ ಇದೆ: ಎಂ. ಡಿ ಲಕ್ಷ್ಮೀನಾರಾಯಣ ಟಿಕೆಟ್ ಕೊಟ್ಟಿಲ್ಲ ಅಂತ ಬೈದುಕೊಂಡು ತಿರುಗುತ್ತಿದ್ದಾನೆ. ಸಿದ್ದರಾಮಯ್ಯ, ಡಿಕೆಶಿ ಮಾತು ಕೊಟ್ಟಿದ್ರು ಅಂತಿದ್ದಾನೆ. ನಾನು ಯಾರಿಗೂ ಮಾತುಕೊಟ್ಟಿಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದ್ವಿ. ಸೀತಾರಾಂ ಪರ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಬೇಡ ಅಂತ ಮೊನ್ನೆ ಹೇಳಿದ್ದೇನೆ. ಕಾಂಗ್ರೆಸ್ ನಲ್ಲಿ ಹಿರಿಯ ಸ್ಥಾನ ನಿನಗೆ ಇದೆ ಅಂದಿದ್ದೇನೆ. ಬಲಿಜ ಸಮುದಾಯ ಕಾಂಗ್ರೆಸ್ ಜೊತೆ ಇದೆ ಎಂದು ಹೇಳಿದರು.
ಸೀತಾರಾಂ ನನ್ನ ಜೊತೆಗೆ ಇರುತ್ತೇನೆ ಅಂತ ಹೇಳಿದ್ದಾರೆ. ಆದ್ರೆ ಮನಸಾರೆ ಆ ಮಾತುಗಳನ್ನು ಹೇಳಿಲ್ಲ. ಮುಂದೆ ನಿನಗೆ ಸ್ಥಾನ ಕೊಡಿಸ್ತೇನೆ ಅಂದಿದ್ದೇನೆ ಎಂದು ತಮ್ಮ ಭೇಟಿಗೆ ಬಂದ ಸೀತಾರಾಂ ಅಭಿಮಾನಿಗಳಿಗೆ ಸಿದ್ದರಾಮಯ್ಯ ಭರವಸೆ ಕೊಟ್ಟರು.
ಲಕ್ಷ್ಮೀನಾರಾಯಣ ಹೊಟ್ಟೆಕಿಚ್ಚಿಗೆ ಸಭೆಗೆ ಹೋಗಿದ್ದ: ಮುಂದೆ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರ ಟಿಕೆಟ್ ನೀಡೋಣ. ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಒಂದು ವೇಳೆ ಟಿಕೆಟ್ ಸಿಗದೆ ಹೋದ್ರೆ ಸೀತಾರಾಂಗೆ ಪರಿಷತ್ ಸ್ಥಾನ ನೀಡೋಣ. ಸೀತಾರಾಂ ಕಾಂಗ್ರೆಸ್ ಬಿಟ್ಟರೆ ಡ್ಯಾಮೇಜ್ ಆಗುತ್ತೆ ಅಂತ ಗೊತ್ತಿದೆ. ಸೀತಾರಾಂ ನಿಮ್ಮ ಜೊತೆ ಇರುತ್ತೇನೆ ಸರ್ ಅಂತಿದ್ದಾರೆ. ಆದ್ರೆ ಕಾಂಗ್ರೆಸ್ನಲ್ಲಿ ಇರ್ತೇನೆ ಅಂತ ಹೇಳುತ್ತಿಲ್ಲ. ರಕ್ಷಾ ರಾಮಯ್ಯ ಅವರನ್ನು ಕರೆಸಿ ಮಾತನಾಡಿದ್ದೆ. ನಿಮ್ಮ ಅಪ್ಪನಿಗೆ ಹೇಳಪ್ಪ ಅಂತ ತಿಳಿಸಿದೆ. ಸಭೆ ಮಾಹಿತಿ ಸಂಗಮೇಶನಿಂದ ಪಡೆದಿದ್ದೇನೆ. ಲಕ್ಷ್ಮೀನಾರಾಯಣ ಹೊಟ್ಟೆಕಿಚ್ಚಿಗೆ ಸಭೆಗೆ ಹೋಗಿದ್ದ. ಪರಿಷತ್ ಟಿಕೆಟ್ ಸಿಕ್ಕಿಲ್ಲ ಅಂತ ಹೊಟ್ಟೆ ಕಿಚ್ಚು ಅವನಿಗೆ. ಈಗ ನನ್ನ ಡಿಕೆಶಿನ ಬೈದುಕೊಂಡು ಓಡಾಡುತ್ತಿದ್ದಾನೆ ಎಂದು ಮಾಜಿ ಎಂಎಲ್ಸಿ, ಎಂ. ಡಿ ಲಕ್ಷ್ಮೀನಾರಾಯಣ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಎಸ್ಟಿ ಮೀಸಲಾತಿಗೆ ಪಟ್ಟು.. ವರದಿ ಬರುವ ಮುನ್ನವೇ ಕುರುಬ ಸಮುದಾಯದಿಂದ ಮತ್ತೆ ಹಕ್ಕೊತ್ತಾಯ ಸಭೆ