ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮಸದಿ ಪಾರ್ಕ್ಗೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಬಕ್ರೀದ್ ಹಬ್ಬದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮುಸ್ಲಿಂ ಸಮುದಾಯಕ್ಕೆ ಬಕ್ರಿದ್ ಶುಭಾಶಯ ಕೋರಿದ ಸಚಿವರು, ಶಾಂತಿ ಸಹಬಾಳ್ವೆಯ ಸಂದೇಶ ಸಾರುವ ಹಬ್ಬ ಎಲ್ಲರ ಬಾಳಲ್ಲಿ ಸುಖ ಸಂತೋಷ ತರಲಿ ಎಂದು ಹಾರೈಸಿದರು.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿ, ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ತರಲೆಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟ್ವೀಟ್ ಮಾಡಿ, ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಶುಭಾಶಯ ತಿಳಿಸಿದ್ದಾರೆ. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಶರಣ್ ಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪೂರ್, ಸಂತೋಷ್ ಲಾಡ್, ಎನ್.ಎಸ್. ಭೋಸರಾಜ್, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಬಳ್ಳಾರಿಯಲ್ಲಿ ಬಕ್ರೀದ್ ಆಚರಣೆ: ಬ್ರಕ್ರೀದ್ ಅನ್ನು ಗಣಿನಾಡು ಬಳ್ಳಾರಿಯಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ನಾಗೇಂದ್ರ ಬಿಳಿ ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಸಚಿವರು, ಬಕ್ರೀದ್ ಶುಭಾಶಯ ತಿಳಿಸಿದರು. ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬೆಳಗಾವಿಯಲ್ಲಿ ಬಕ್ರೀದ್ ಆಚರಣೆ: ನಗರ ಸೇರಿ ಜಿಲ್ಲೆಯಾದ್ಯಂತ ಮುಸ್ಲಿಮರು ಹಬ್ಬ ಆಚರಿಸಿದರು. ಬೆಳಗ್ಗಿನ ಜಾವವೇ ಈದ್ಗಾ ಮೈದಾನಗಳಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ನಗರದ ಕೋರ್ಟ್ ರಸ್ತೆಯಲ್ಲಿರುವ ಅಂಜುಮನ್- ಎ– ಇಸ್ಲಾಂ ಸಂಸ್ಥೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಹುತೇಕ ಎಲ್ಲೆಡೆ ಈ ಬಾರಿ ಧರ್ಮಗುರುಗಳ ನೇತೃತ್ವದಲ್ಲಿ ಮಳೆಗಾಗಿ ದೇವರಿಗೆ ಪ್ರಾರ್ಥನೆ ಮಾಡಿದ್ದು ಕಂಡುಬಂತು.
ಶಾಸಕ ಆಸೀಫ್ (ರಾಜು) ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್ ಅವರಿಗೆ ಮುಸ್ಲಿಮರು ಹಾಗೂ ಅಧಿಕಾರಿಗಳು ಹಬ್ಬದ ಶುಭಾಶಯ ಕೋರಿದರು. ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು, ಹಿರಿಯರು ಸೇರಿ ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು.
ನಗರದ ಐತಿಹಾಸಿಕ ಕೋಟೆ ಆವರಣದಲ್ಲಿರುವ ಖಿಲ್ಲಾ ಮಸೀದಿ, ರೈಲು ನಿಲ್ದಾಣ ಸಮೀಪದ ಈದ್ಗಾ ಮೈದಾನ, ಟಿಳಕವಾಡಿ, ವಡಗಾವಿ ಹಾಗೂ ಅಲಾರವಾಡ ಈದ್ಗಾ ಮೈದಾನಗಳಲ್ಲೂ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೈದಾನ, ಪ್ರಮುಖ ವೃತ್ತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಮನೆಗಳಲ್ಲಿ ಮುಸ್ಲಿಂ ಮಹಿಳೆಯರು ಪ್ರಾರ್ಥನೆ ಸಲ್ಲಿಸಿದರು. ಈದ್ ವಿಶೇಷ ಖಾದ್ಯಗಳಾದ ಶುರಕುಂಬ, ಗುಲ್ಕಂದ್, ಫಿಕನಿ, ಪನೀರ್, ಕೀರ್, ಮಕನೆಕೀರ್, ಶಾಹಿ ತುಕಡಿ ಮುಂತಾದ ಸಿಹಿ ಪದಾರ್ಥಗಳನ್ನು ನಿನ್ನೆ ರಾತ್ರಿಯಿಂದಲೇ ಮಹಿಳೆಯರು ಸಿದ್ಧಪಡಿಸಿಕೊಂಡಿದ್ದರು. ಮಧ್ಯಾಹ್ನದ ಸಾಮೂಹಿಕ ಭೋಜನಕ್ಕೆ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಕನ್ ಕೋಫ್ತಾ, ಕಲೇಜಾ ಮಸಾಲಾ, ಕಚ್ಚಾಕೀಮ್, ಮಟ್‌ಟಿಕ್ಕಾ, ಚಿಕನ್ ಕಬಾಬ್, ಚಿಕನ್ ತಂದೂರಿ, ಚಿಕನ್ ಫ್ರೈ, ಮಟನ್ ಫ್ರೈ ಸೇರಿ ಮುಂತಾದ ಖಾದ್ಯಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಸಿದ್ಧಪಡಿಸಿಕೊಳ್ಳಲಾಗಿತ್ತು.
ರಾಯಚೂರು ಜಿಲ್ಲೆಯಾದ್ಯಂತ ಬಕ್ರೀದ್: ರಾಯಚೂರು ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸಂಭ್ರಮ- ಸಡಗರದಿಂದ ಆಚರಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರದಲ್ಲಿ ಮೌಲ್ವಿ ಪ್ರವಚನ ಹೇಳುವ ಮೂಲಕ ಬಕ್ರೀದ್ ಹಬ್ಬದ ಮಹತ್ವ ಹಾಗೂ ಆಚರಣೆ ಕುರಿತಾಗಿ ತಿಳಿಸಿದರು. ನಂತರ ಜಿಲ್ಲಾಧಿಕಾರಿ ವೆಂಕಟೇಶ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಪೌರಾಯುಕ್ತ ಗುರುಲಿಂಗಪ್ಪ ಸೇರಿದಂತೆ ಅನೇಕ ಗಣ್ಯರು ಹಬ್ಬದ ಶುಭಾಶಯ ತಿಳಿಸಿದರು. ಪ್ರಾರ್ಥನೆ ಸಲ್ಲಿಸುವ ವೇಳೆ ಯಾವುದೇ ಅಡಚಣೆಯಾಗದಂತೆ ಈದ್ಗಾ ಮೈದಾನ ಮುಂಭಾಗದಲ್ಲಿ ಮುಖ್ಯರಸ್ತೆ ಸಂಚಾರಿಸುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿತ್ತು.
ಚಾಮರಾಜನಗರದಲ್ಲಿ ಸಂಭ್ರಮದ ಬಕ್ರೀದ್: ಚಾಮರಾಜನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಡಗರದಿಂದ ಬಕ್ರೀದ್ ಆಚರಿಸಿ, ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚಾಮರಾಜನಗರದ ಕ್ರೀಡಾಂಗಣ ಸಮೀಪದ ಈದ್ಗಾ ಮೈದಾನದಲ್ಲಿ ಹೊಸ ದಿರಿಸು ಧರಿಸಿ ಬಂದ ಚಿಣ್ಣರು ಹಾಗೂ ಹಿರಿಯರು ಕುರಾನ್ ಘೋಷವಾಕ್ಯಗಳನ್ನು ಪಠಿಸಿದರು. ಅಲ್ಲಾಹು ಎಲ್ಲರಿಗೂ ಒಳ್ಳೆಯದು ಮಾಡಲಿ, ಮಕ್ಕಳಿಗೆ ಹೆಚ್ಚಿನ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಧಾರ್ಮಿಕ ಗುರುಗಳು ಶುಭ ಸಂದೇಶ ತಿಳಿಸಿ ಬಕ್ರೀದ್ ಮಹತ್ವ ತಿಳಿಸಿಕೊಟ್ಟರು.
ಹುಬ್ಬಳ್ಳಿಯಲ್ಲಿ ಬಕ್ರೀದ್ ಹಬ್ಬ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬಾಚರಣೆ ಮಾಡಿದರು. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಹತ್ತಿರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ವೃತ್ತ, ರೈಲ್ವೆ ನಿಲ್ದಾಣ ರಸ್ತೆಯ ಲ್ಯಾಮಿಂಗ್ಟನ್ ಶಾಲೆಯವರೆಗೂ ರಸ್ತೆಯಲ್ಲಿ ಸೇರಿದ್ದ ಮುಸ್ಲಿಂ ಸಮಾಜದವರು ಪ್ರಾರ್ಥನೆ ಸಲ್ಲಿಸಿದರು. ಕಾರವಾರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲೂ ಕೂಡ ಪ್ರಾರ್ಥನೆ ಸಲ್ಲಿಸಲಾಯಿತು.
ಇದನ್ನೂ ಓದಿ: ಮುಸ್ಲಿಂರಿಗೆ ಹಿಂದಿನ ಸರ್ಕಾರದಿಂದ ಆತಂಕ, ಭಯವಿತ್ತು ಹೀಗಾಗಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ: ಗೃಹ ಸಚಿವ ಜಿ ಪರಮೇಶ್ವರ್