ಬೆಂಗಳೂರು: ನೈರುತ್ಯ ರೈಲ್ವೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಸುಮಾರು 314 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿರುವ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಮಾರ್ಚ್ ಅಂತ್ಯದ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ.
ಇತ್ತೀಚೆಗಷ್ಟೇ ಈ ನೂತನ ಟರ್ಮಿನಲ್‌ಗೆ ‘ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್’ ಎಂದು ನಾಮಕರಣ ಮಾಡಲಾಗಿದೆ. ಹೊರನೋಟಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಲುವ ಈ ಟರ್ಮಿನಲ್, ಹವಾನಿಯಂತ್ರಿತ ವ್ಯವಸ್ಥೆ, ಫ್ಲಾಟ್ ಫಾರ್ಮ್‌ಗಳು, ವಿಶ್ರಾಂತಿ ಕೊಠಡಿ, ಶೌಚಾಲಯ, ಬಸ್ ಬೇ, ವಿಶಾಲವಾದ ವಾಹನ ನಿಲುಗಡೆ ಸ್ಥಳ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿನ ಸೌಲಭ್ಯಗಳು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವ ನೀಡಲಿದೆ.
ಬೆಂಗಳೂರು ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ನಗರದ 3ನೇ ಕೋಚಿಂಗ್ ಟರ್ಮಿನಲ್ ಇದಾಗಿದೆ. ಈ ನೂತನ ಟರ್ಮಿನಲ್ ಆರಂಭವಾದ ನಂತರ ಪ್ರಮುಖ ಎರಡು ರೈಲು ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆ ಆಗಲಿದೆ. ನೈಋತ್ಯ ರೈಲ್ವೆಯು ಈಗಾಗಲೇ ಈ ಟರ್ಮಿನಲ್‌ನಿಂದ ದೂರಪ್ರಯಾಣದ ರೈಲುಗಳನ್ನು ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಿದೆ.
ನೂತನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ 7 ಪ್ಲಾಟ್‌ಫಾರ್ಮ್‌ಗಳು, ಏಳು ಸ್ಟಾಬ್ಲಿಂಗ್ ಲೈನ್‌ಗಳು ಹಾಗೂ ಮೂರು ಪಿಟ್‌ಲೈನ್‌ಗಳು ಹೊಂದಿದೆ. ಪ್ರತಿ ಪ್ಲಾಟ್‌ಫಾರ್ಮ್‌ಗಳು 15 ಮೀಟರ್ ಅಗಲ ಮತ್ತು 600 ಮೀಟರ್ ಉದ್ದ ಇವೆ. ಇಡೀ ಟರ್ಮಿನಲ್ ಹಾಗೂ ಪ್ಲಾಟ್ಫಾರ್ಮ್ಗಳಲ್ಲಿ ಎಲ್‌ಇಡಿ ಲೈಟ್ಸ್ ಅಳವಡಿಸಲಾಗಿದೆ. ಹಾಗೆಯೇ, ಎಲ್ಲಾ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸಲು ಅನುವಾಗುವಂತೆ ಎರಡು ಸಬ್‌ವೇ ನಿರ್ಮಿಸಲಾಗಿದೆ. ಈ ಟರ್ಮಿನಲ್‌ನಲ್ಲಿ ವಿಶೇಷವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಅಂತೆಯೆ ನಾಲ್ಕು ಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನೂ ಒಳಗೊಂಡಿದೆ. ಹಾಗೂ 200ಕ್ಕೂ ಅಧಿಕ ಕಾರು ಹಾಗೂ ಸುಮಾರು ಒಂದು ಸಾವಿರ ದ್ವಿಚಕ್ರ ವಾಹನ ನಿಲುಗಡೆ ಮಾಡುವಷ್ಟು ವಿಶಾಲವಾದ ಪಾರ್ಕಿಂಗ್ ಸ್ಥಳವನ್ನು ನಿರ್ಮಾಣ ಮಾಡಲಾಗಿದೆ.
4,200 ಚದರ ಮೀಟರ್ ಟರ್ಮಿನಲ್ ಕಟ್ಟಡವು ಪ್ರತಿದಿನ 50 ಸಾವಿರ ಪ್ರಯಾಣಿಕರನ್ನು ಒಯ್ಯಲು, 50 ರೈಲುಗಳು ಈ ಮಾರ್ಗವಾಗಿ ಚಲಿಸುತ್ತವೆ. ಎರಡು ಸುರಂಗಮಾರ್ಗಗಳನ್ನು ಸಹ ನಿರ್ಮಿಸಲಾಗಿದೆ. ಇದು ನಿಲ್ದಾಣದ ಎಲ್ಲಾ ಪ್ಲಾಟ್‌ಫಾರ್ಮ್‌ಗಾಳಿಗೆ ಹೋಗಲು ಅನುಕೂಲ ಕಲ್ಪಿಸುತ್ತದೆ. ಮೇಲ್ಸೇತುವೆ ಹೊರತುಪಡಿಸಿ ಎಲ್ಲಾ 7 ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುತ್ತದೆ. ಪ್ರಯಾಣಿಕರು ಮೆಟ್ಟಿಲುಗಳು ಮತ್ತು ಇಳಿಜಾರುಗಳ ಮೂಲಕ ಸುರಂಗ ಮಾರ್ಗಗಳನ್ನು ಪ್ರವೇಶಿಸಬಹುದಾಗಿದೆ.
ಟರ್ಮಿನಲ್ ಮತ್ತು ಪ್ಲಾಟ್‌ಫಾರ್ಮ್‌ಗಳ ಮತ್ತೊಂದು ವಿಶೇಷತೆ ಎಂದರೆ ಎಲ್‌ಇಡಿ ದೀಪಗಳನ್ನು ಅಳವಡಿಸಿರುವುದಾಗಿದೆ. ಕಟ್ಟಡಕ್ಕೆ ಮಳೆನೀರು ಕೊಯ್ಲು ಮತ್ತು ಶೇಖರಣಾ ಸೌಲಭ್ಯವನ್ನು ನಿರ್ಮಿಸಲಾಗಿದ್ದು, ನಾಲ್ಕು ಲಕ್ಷ ಲೀಟರ್ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕವನ್ನೂ ಹೊಂದಿದೆ.
ಟರ್ಮಿನಲ್ ಮೇಲ್ವರ್ಗದ ವೇಟಿಂಗ್ ಹಾಲ್, ಡಿಜಿಟಲ್ ರಿಯಲ್-ಟೈಮ್ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಮತ್ತು ವಿಐಪಿ ವಿಶ್ರಾಂತಿ ಕೊಠಡಿನ್ನು ಹೊಂದಿರುತ್ತದೆ. ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳು 7 ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುತ್ತವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ರಾಜ್ಯದ ದೂರದೃಷ್ಟಿಯ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯರ ನಂತರ ಸರ್ಕಾರವು ಟರ್ಮಿನಲ್ ಎಂದು ಮರುನಾಮಕರಣ ಮಾಡಿತ್ತು. 2015-16ರಲ್ಲಿ ಮಂಜೂರಾದ ಹೊಸ ಟರ್ಮಿನಲ್ ಕಳೆದ 2 ವರ್ಷಗಳ ಹಿಂದೆಯೇ ನಿರ್ಮಾಣವಾಗಬೇಕಾಗಿತ್ತು. ಕೆಲವು ಅಡೆತಡೆಗಳಿಂದ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿತ್ತು, ಇದೀಗ ಮಾರ್ಚ್ ಹಂತದ ಒಳಗೆ ಪ್ರಯಾಣಿಕರ ಉಪಯೋಗಕ್ಕೆ ಸಿದ್ಧವಾಗಲಿದೆ.
ಓದಿ: ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಭೂ ಒತ್ತುವರಿ; ಸುಪ್ರೀಂನಲ್ಲಿ ಅಫಿಡವಿಟ್ ಹಾಕಿ ಮುಂದಿನ ಕ್ರಮ: ಅಶೋಕ್
ಎಸ್‌ಡಬ್ಲ್ಯುಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಮಾತನಾಡಿ, ಮಾರ್ಚ್ ಅಂತ್ಯದ ವೇಳೆಗೆ ಟರ್ಮಿನಲ್ ಸಿದ್ಧವಾಗುವ ನಿರೀಕ್ಷೆಯಿದೆ. ಈ ಟರ್ಮಿನಲ್ ಆರಂಭವಾದ ನಂತರ, ಬೆಂಗಳೂರಿನಿಂದ ಮುಂಬೈ ಮತ್ತು ಚೆನ್ನೈನಂತಹ ಇತರ ಮಹಾನಗರಗಳಿಗೆ ಹೆಚ್ಚು ದೂರದ ರೈಲುಗಳು ಮತ್ತು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಬೆಂಗಳೂರನ್ನು ಸಂಪರ್ಕಿಸುವ ರೈಲುಗಳು ಸಂಚಾರ ಮಾಡುತ್ತದೆ. ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣದಲ್ಲಿ ಪ್ರಯಾಣಿಕರ ಮತ್ತು ವಾಹನ ದಟ್ಟಣೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೇಂದ್ರೀಕೃತ ಹವಾನಿಯಂತ್ರಣ ಮತ್ತು ವಿಮಾನ ನಿಲ್ದಾಣದ ಮುಂಭಾಗವನ್ನು ಹೊಂದಿರುವ ಆಧುನಿಕ ನಿಲ್ದಾಣ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವಾಗಿರುತ್ತದೆ ಎಂದು ವಿಜಯ ತಿಳಿಸಿದ್ದಾರೆ.