ಬೆಂಗಳೂರು : ಮಾದಕ ವಸ್ತು ಸರಬರಾಜು ಮಾಡಿದ ಆರೋಪದಡಿ ಬಂಧಿತರಾಗಿರುವ ಇಬ್ಬರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 7ಕ್ಕೆ ಮುಂದೂಡಿದೆ.
ಡ್ರಗ್ಸ್ ಸರಬರಾಜು ಮಾಡಿದ ಆರೋಪದಡಿ ಮಾದಕ ವಸ್ತು ನಿಯಂತ್ರಣ ದಳದ(ಎನ್.ಸಿ.ಬಿ) ಅಧಿಕಾರಿಗಳು ಬಂಧಿಸಿರುವ ಮೊಹ್ಮದ್ ಅನೂಪ್ ಹಾಗೂ ರಿಜೇಶ್ ರವಿಚಂದ್ರನ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನಗರದ 33ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ವಿವರಣೆ ನೀಡಿ, ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಸಂಗೀತ ಕಾರ್ಯಕ್ರಮಗಳು ಹಾಗೂ ರೇವ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸಿದ ಆರೋಪ ಇವರ ಮೇಲಿದೆ. ಹೀಗಾಗಿ, ಮಾಹಿತಿ ಸಂಗ್ರಹಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಕೀಲರ ಕೋರಿಕೆ ಪರಿಗಣಿಸಿದ ಕೋರ್ಟ್, ಆರೋಪಿತರ ಜಾಮೀನು ಕೋರಿಕೆ ಅರ್ಜಿಗಳನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.