ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಕುರ್ಚಿ ಅಭದ್ರ ಎನ್ನುವ ವಾತಾವರಣ ಮತ್ತೆ ಸೃಷ್ಟಿಯಾಗಿದೆ. ಸ್ವಪಕ್ಷೀಯ ನಾಯಕರ ಹೇಳಿಕೆಗಳು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವುಕ ನುಡಿ, ಬಿ.ಎಲ್ ಸಂತೋಷ್ ಸ್ಪಷ್ಟೀಕರಣ ಸಿಎಂ ಬದಲಾವಣೆಗೆ ಪುಷ್ಟಿ ನೀಡುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ನಾಯಕತ್ವ ಬದಲಾವಣೆ ವಿಷಯ ಪದೇ ಪದೇ ಚರ್ಚೆಗೆ ಬರುತ್ತಿದೆ. ಯಡಿಯೂರಪ್ಪ ನಾಯಕತ್ವ ಬದಲಾವಣೆ ಕುರಿತು ಸತತವಾಗಿ ಚರ್ಚೆಗಳು ನಡೆದು ಕಡೆಗೆ 2 ವರ್ಷ ಅಧಿಕಾರ ಪೂರ್ಣಗೊಳಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು.
ಇದೀಗ ಯಡಿಯೂರಪ್ಪ ಜಾಗಕ್ಕೆ ಬೊಮ್ಮಾಯಿ ಬಂದಿದ್ದರೂ ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮಾತ್ರ ನಿಂತಿಲ್ಲ. ಬೊಮ್ಮಾಯಿ ಸ್ಥಾನವೂ ಭದ್ರವಿಲ್ಲ ಎನ್ನುವ ವದಂತಿ ನಿರಂತರವಾಗಿ ಹರಿದಾಡುತ್ತಲೇ ಇದೆ.
ಸ್ವಪಕ್ಷೀಯರಿಂದಲೇ ನಾಯಕತ್ವ ಬದಲಾವಣೆ ಹೇಳಿಕೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸ್ವಪಕ್ಷೀಯ ನಾಯಕರಿಂದಲೇ ಹೇಳಿಕೆಗಳು ಕೇಳಿಬರುತ್ತಿವೆ. ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಮುರುಗೇಶ್ ನಿರಾಣಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ನಾಯಕತ್ವ ಬದಲಾವಣೆ ವದಂತಿಗೆ ತುಪ್ಪ ಸರಿದಿದ್ದಾರೆ.
ನಂತರ ಸಂಪುಟ ಸಹೋದ್ಯೋಗಿಗಳೆಲ್ಲಾ ನಾಯಕತ್ವ ಬದಲಾವಣೆ ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದರೂ ಎಲ್ಲೋ ಒಂದು ಕಡೆ ನಾಯಕತ್ವ ವಿಚಾರದಲ್ಲಿ ಗೊಂದಲಮಯ ವಾತಾವರಣ ಇರುವುದು ಸ್ಪಷ್ಟ ಎನ್ನುವುದಕ್ಕೆ ನಿದರ್ಶನವಾಗಿದೆ.
ಸಿಎಂ ಭಾವುಕ ನುಡಿ, ಬಿ.ಎಲ್ ಸಂತೋಷ್ ಹೇಳಿಕೆ ಹೊತ್ತಿಸಿತಾ ಕಿಡಿ?
ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಸಿಎಂ ಆಡಿರುವ ಭಾವುಕ ಮಾತುಗಳು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚರ್ಚೆ ಮತ್ತೆ ಶುರುವಿಟ್ಟುಕೊಳ್ಳುವಂತೆ ಮಾಡಿದೆ.
ಇದಕ್ಕೂ ಮೊದಲು ಬೆಂಗಳೂರಿನ ಪುರಭವನದಲ್ಲಿ ನಡೆದಿದ್ದ ವೀರ್ ಸಾವರ್ಕರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಬಿ.ಎಲ್.ಸಂತೋಷ್, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿಎಂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಚರ್ಚೆಯಾಗುತ್ತಿದೆ.
ಆದರೆ, ವೀರ ಸಾವರ್ಕರ್ ಬಗ್ಗೆ ಸಿಎಂ ಮಾತುಗಳನ್ನು ಕೇಳಿದರೆ ಅದ್ಯಾವುದು ಇಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದಿದ್ದನ್ನು ನೋಡಿದರೆ ಹೈಕಮಾಂಡ್ ಮಟ್ಟದಲ್ಲಿಯೂ ನಾಯಕತ್ವ ಬದಲಾವಣೆ ವಿಷಯದ ಕುರಿತು ಚರ್ಚೆ ನಡೆದಿರುಬಹುದು ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಏಕಾಏಕಿ ಈ ವಿಚಾರ ಚರ್ಚೆಗೆ ಬಂದಿದ್ದು ಎಲ್ಲರಿಗೂ ಅಚ್ಚರಿಯುಂಟು ಮಾಡಿತ್ತು. ಈ ವಿಚಾರ ಪ್ರಸ್ತಾಪ ಮಾಡುವ ಯಾವುದೇ ಹಿನ್ನೆಲೆ ಸಭೆಯಲ್ಲಿ ಇರಲಿಲ್ಲ. ಆದರೂ ಸಂತೋಷ್ ಅವರು ಈ ವಿಷಯವನ್ನು ಯಾಕೆ ಪ್ರಸ್ತಾಪಿಸಿದರು ಎನ್ನುವುದು ಇದೀಗ ಹೊಸ ಚರ್ಚೆ ಹುಟ್ಟುವಂತೆ ಮಾಡಿದೆ.
ಇದನ್ನೂ ಓದಿ: MES ಕಿಡಿಗೇಡಿಗಳ ಗಡಿಪಾರಿಗೆ ಸಿದ್ದರಾಮಯ್ಯ ಆಗ್ರಹ
ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮತ್ತೆ ಮುನ್ನಲೆಗೆ ಬರುತ್ತಿದ್ದಂತೆ ಸಂಪುಟ ಸಹೋದ್ಯೋಗಿಗಳೆಲ್ಲಾ ಸಿಎಂ ಬೆಂಬಲಕ್ಕೆ ನಿಂತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಬೊಮ್ಮಾಯಿ ನಾಯಕತ್ವ ಬದಲಿಲ್ಲ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ತೆರಳುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ನಂತರವೂ ನಾಯಕತ್ವ ಬದಲಾವಣೆ ವಿಷಯಕ್ಕೆ ತೆರೆ ಬಿದ್ದಿಲ್ಲ. ಹೊಸ ಮುಖ್ಯಮಂತ್ರಿ ಬಂದು 5 ತಿಂಗಳಲ್ಲೇ ನಾಯಕತ್ವ ಬದಲಾವಣೆ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ಪ್ರತಿಪಕ್ಷಗಳು ಹೇಳುತ್ತಿವೆ.
ಈ ಎಲ್ಲಾ ವಿದ್ಯಮಾನಗಳನ್ನು ನೋಡುತ್ತಿದ್ದರೆ ರಾಜ್ಯ ಬಿಜೆಪಿ ಪಾಳಯಲ್ಲಿ ಮತ್ತೆ ರಾಜಕೀಯ ವಿದ್ಯಮಾನಗಳು ಗರಿಗೆದರುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.