ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಸಾಲೆ ದೋಸೆ ಅಂದರೆ ಎಲ್ಲಿಲ್ಲದ ಪ್ರೀತಿ. ರಾಜಕೀಯ ಜಂಜಾಟದ ನಡುವೆ ಆಗಾಗ ಬಿಡುವು ಮಾಡಿಕೊಂಡು ನೆಚ್ಚಿನ ಹೋಟೆಲ್ಗೆ ತೆರಳಿ ಮಸಾಲೆ ದೋಸೆ ಸವಿಯುವುದು ಯಡಿಯೂರಪ್ಪ ಅವರ ಅಭ್ಯಾಸ. ಇಂದು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ ಮಾಜಿ ಸಿಎಂ ದೋಸೆಯ ರಚಿ ನೋಡಿದ್ದಾರೆ.
ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪಗೆ ದೋಸೆ ಮೇಲೆ ತುಸು ಹೆಚ್ಚೇ ವ್ಯಾಮೋಹವಿದೆ. ಅಧಿಕಾರ ಇರಲಿ ಇಲ್ಲದಿರಲಿ, ಎಷ್ಟೇ ರಾಜಕೀಯ ಒತ್ತಡವಿರಲಿ ದೋಸೆ ತಿನ್ನುವ ಆಸೆಯಾಯಿತೆಂದರೆ ಆಪ್ತರೊಟ್ಟಿಗೆ ನೆಚ್ಚಿನ ಹೋಟೆಲ್ಗೆ ಯಡಿಯೂರಪ್ಪ ಭೇಟಿ ನೀಡುತ್ತಾರೆ. ತವರು ಜಿಲ್ಲೆಗೆ ಹೋದರೆ ಮೀನಾಕ್ಷಿ ಭವನ್, ಬಸವನಗುಡಿ ಕಡೆ ಹೋದರೆ ವಿದ್ಯಾರ್ಥಿ ಭವನ, ಲಾಲ್ ಬಾಗ್ ಕಡೆ ಹೋದರೆ ಮಾವಳ್ಳಿ ಟಿಫನ್ ರೂಂ, ಮನೆ ಹತ್ತಿರವಾದರೆ ಜನಾರ್ದನ ಹೋಟೆಲ್, ವಿದೇಶ ಪ್ರವಾಸಕ್ಕೆ ಹೋದರೆ ಎಂಟಿಆರ್ ಹೀಗೆ ಎಲ್ಲೇ ಹೋದರೂ ಯಡಿಯೂರಪ್ಪ ದೋಸೆ ಸವಿಯೋದನ್ನು ಮಾತ್ರ ಬಿಡಲ್ಲ.
ಇಂದು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಪದ್ಮನಾಭ ನಗರದಿಂದ ವಾಪಸ್ ಬರುವಾಗ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿ ಭವನದ ದೋಸೆಯ ಘಮಲು ಯಡಿಯೂರಪ್ಪ ಅವರನ್ನು ಕೈಬೀಸಿ ಕರೆದಿದೆ. ದೋಸೆ ನೆನಪಿಸಿಕೊಂಡ ಬಿಎಸ್ವೈ ವಿದ್ಯಾರ್ಥಿ ಭವನಕ್ಕೆ ತೆರಳಿ ಬಿಸಿ ಬಿಸಿ ಮಸಾಲೆ ದೋಸೆ ಸವಿದು ಚಹಾ ಹೀರಿದರು. ಈ ಸಂದರ್ಭದಲ್ಲಿ ಶಾಸಕ ಗರುಡಾಚಾರ್, ಎಸ್.ಆರ್.ವಿಶ್ವನಾಥ್, ಎಂ.ಕೃಷ್ಣಪ್ಪ ಕೂಡ ಡಿ ಎನ್ ಜೀವರಾಜ್ ಬಿಎಸ್ವೈ ಜೊತೆ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದರು.
ಇದನ್ನೂ ಓದಿ : ಸರ್ಕಾರಿ ಜಾಗ ಅತಿಕ್ರಮ ಮಾಡಿಕೊಂಡವರಿಗೆ ಪರಿಹಾರ ಒದಗಿಸಲು ಸಾಧ್ಯವಿಲ್ಲ: ಮುನಿರತ್ನ