ಬೆಂಗಳೂರು: ರಾಬರ್ಟ್ ಬಾಷ್ ಎಂಜಿನಿಯರಿಂಗ್ ಮತ್ತು ಬ್ಯುಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಚಾಲಿತ ಎಲಿವೇಟರ್ ಮತ್ತು ಎಸ್ಕಲೇಟರ್ ಗಳ ಪರಿಹಾರ ಕಾರ್ಯಯೋಜನೆಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಿದರು.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಬಾಷ್ ಸಂಸ್ಥೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಷ್ ಕಂಪನಿ ಸಾರ್ವಜನಿಕರಿಗೆ ಉತ್ತಮ ಪರಿಹಾರಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಮೇಕ್ ಇನ್ ಇಂಡಿಯಾಗೆ ಪೂರಕವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗಳನ್ನು ಬೆಂಗಳೂರಿನಲ್ಲಿಯೇ ಸಿದ್ಧಪಡಿಸಿರುವುದು ಹೆಮ್ಮೆಯ ಸಂಗತಿ. ಇದನ್ನು ಮೇಕಿಂಗ್ ಬೆಂಗಳೂರು ಎಂದು ಕೂಡ ಕರೆಯಬಹುದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಷ್ ಸಂಸ್ಥೆಯ ದತ್ತಾತ್ರೆಯ ಎಸ್. ಮಾತನಾಡಿ, ಇದೊಂದು ಮ್ಯಾಜಿಕ್ ಬಾಕ್ಸ್ ಇದ್ದ ಹಾಗೆ. ಬೆಂಗಳೂರಿನಲ್ಲಿರುವ ಎಸ್ಕಲೇಟರ್ ಹಾಗೂ ಎಲಿವೇಟರ್ ಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಈ ಫ್ಯಾಂಟಮ್ ಬಾಕ್ಸ್ ಮೂಲಕ ಕಂಡುಕೊಳ್ಳಬಹುದಾಗಿದೆ. ಅಲ್ಲದೆ ಇದಕ್ಕೆ ಬೇಕಾದಂತಹ ಸಾಫ್ಟ್ವೇರ್ ಅಳವಡಿಸಿದ್ದು ಕೂತಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕೆಲವೇ ತಿಂಗಳಲ್ಲಿ 28 ಸ್ಕೈ ಭಾಗಗಳಲ್ಲಿ ಇದನ್ನು ಅಳವಡಿಸಲಾಗುವುದು. ಈಗಾಗಲೇ ಐದು ಕಡೆಗಳಲ್ಲಿ ಅಳವಡಿಸಿದ್ದು, ಪೈಲಟ್ ಯೋಜನೆ ಜಾರಿಯಲ್ಲಿದೆ ಎಂದರು.