ಬೆಂಗಳೂರು: ಉದ್ಯಮಿ ಅದಾನಿ ಹೂಡಿಕೆ ಪರವಾದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಯನ್ನು ಶ್ಲಾಘಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಟ್ವೀಟ್ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ.
ಟ್ವೀಟ್ ಮಾಡಿರುವ ಬಿ.ಎಲ್.ಸಂತೋಷ್, ಅವರ ನಾಯಕ ರಾಹುಲ್ ಗಾಂಧಿಗೆ ಅವರ ಸ್ಥಾನವನ್ನು ತೋರಿಸಿದ್ದಾರೆ. ವೆಲ್ ಡನ್ ಎಂ.ಬಿ.ಪಾಟೀಲ್ ಸರ್ ಎಂದಿದ್ದಾರೆ. ಆ ಮೂಲಕ ಬಿ.ಎಲ್.ಸಂತೋಷ್ ಅವರು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ. ಅದಾನಿ ವಿರುದ್ಧ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ಉದ್ಯಮಿ ಅದಾನಿ ಹೂಡಿಕೆ ಪರವಾಗಿ ಮಾತನಾಡಿರುವ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಯನ್ನು ಟ್ಯಾಗ್ ಮಾಡಿದ್ದಾರೆ.
ಕೈಗಾರಿಕಾ ಸಚಿವ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ, ಅದಾನಿ ಸಂಸ್ಥೆಗೆ ಕರ್ನಾಟಕದಲ್ಲಿ ಹೂಡಿಕೆ ಪ್ರಸ್ತಾವನೆಗೆ ಸಮಯಾವಕಾಶ ನೀಡುವುದಾಗಿ ತಿಳಿಸಿದ್ದರು. ರಾಜ್ಯದಲ್ಲಿ ಹೂಡಿಕೆ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಅದಾನಿ ಗ್ರೂಪ್ಗೆ ಸಮಯಾವಕಾಶ ನೀಡಲಾಗುವುದು. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹೂಡಿಕೆ ವಿಚಾರದಲ್ಲಿ ಯಾರೊಂದಿಗೆ ಬೇಕಾದರೂ ರಾಜೀ ಮಾಡಿಕೊಳ್ಳಬಲ್ಲದು ಎಂಬುದನ್ನು ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಸರ್ಕಾರದ ಸಚಿವರ ಈ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿ.ಎಲ್.ಸಂತೋಷ್, ಅವರ ನಾಯಕ ರಾಹುಲ್ ಗಾಂಧಿಗೆ ಅವರ ಸ್ಥಾನವನ್ನು ತೋರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಕೈಗಾರಿಕೆ ಸ್ಥಾಪಿಸಲು ಅಂಬಾನಿ, ಅದಾನಿಯಂತಹ ಉದ್ಯಮಿಗಳು ಬಂದರೂ ಜಾಗ ಕೊಡುತ್ತೇವೆ: ಸಚಿವ ಎಂ.ಬಿ. ಪಾಟೀಲ್
ಹಿಟ್ಲರ್ ಸರ್ಕಾರದ ತುಘಲಕ್ ನೀತಿ ಎಂದು ಬಿಜೆಪಿ ಟೀಕೆ: ರಾಜ್ಯ ಬಿಜೆಪಿ ಘಟಕವು ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟಾಸ್ತ್ರ ಮೂಲಕ ವಾಗ್ದಾಳಿ ನಡೆಸಿದೆ. ಹಿಟ್ಲರ್ ಸರ್ಕಾರದ ತುಘಲಕ್ ನೀತಿ ನಿಯಮಗಳು ಜಾರಿ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ವೈಫಲ್ಯಗಳ ಪಟ್ಟಿ ಮಾಡಿದೆ.
ಅನ್ನ ಭಾಗ್ಯ- ಸಾವಿರಾರು ಕೋಟಿ ಲೂಟಿ, ಅನುರಾಗ್ ತಿವಾರಿ ಸಾವು!, ಕೃಷಿ ಭಾಗ್ಯ - ನೂರಾರು ಕೋಟಿ ಲೂಟಿ, 3,500ಕ್ಕೂ ಹೆಚ್ಚು ರೈತರ ಸಾವು!, ಅಕ್ರಮ ಮರಳು ಮಾಫಿಯಾ- ಪೊಲೀಸರ ಕೊಲೆ!, ಸರ್ಕಾರಿ ಸಂಸ್ಥೆಗಳ ಕಾಂಗ್ರೆಸೀಕರಣ - ಉನ್ನತ ಅಧಿಕಾರಗಳ ಸರಣಿ ಸಾವು!, ಪಿಎಫ್ಐ ಗೂಂಡಾಗಳ ಬಿಡುಗಡೆ- ಹಿಂದೂಪರ ಹೋರಾಟಗಾರರ ಸಾಲು ಸಾಲು ಹತ್ಯೆ! ಇವು ಸಿದ್ದರಾಮಯ್ಯ ಅವರ 1.0 ಅವಧಿಯಲ್ಲಿನ ಮಹತ್ವದ ಕೊಡುಗೆಗಳು ಎಂದು ಬಿಜೆಪಿ ದೂರಿದೆ.
ಸಿದ್ದರಾಮಯ್ಯ ಅವರ 2.0 ಕೊಡುಗೆಗಳು ಪ್ರಾರಂಭ ಎಂದು ಪ್ರಸಕ್ತ ಕಾಂಗ್ರೆಸ್ ಸರ್ಕಾರದ ವಿರುದ್ಧದ ಆರೋಪಗಳ ಪಟ್ಟಿಯನ್ನು ಬಿಜೆಪಿ ಮಾಡಿದೆ. ಮತಾಂತರ ನಿಷೇಧ ವಾಪಸ್ - ಲವ್ ಜಿಹಾದ್, ಆಮಿಷ, ಬಲವಂತದ ಮತಾಂತರಕ್ಕೆ ನಾಂದಿ!, ಮತ್ತೆ ತಲೆ ಎತ್ತಿದ ಮರಳು ಮಾಫಿಯಾ- ಕಲಬುರಗಿಯಲ್ಲಿ ಪೊಲೀಸ್ ಕೊಲೆ, ಅಬಕಾರಿ ಇಲಾಖೆ- ಕೋಟಿ ಕೋಟಿ ರೂ.ಗೆ ಹುದ್ದೆಗಳ ಮಾರಾಟ, ಬೆಲೆ ಏರಿಕೆ - ವಿದ್ಯುತ್, ನೀರು, ಹಾಲು, ಮದ್ಯ, ಮೊಟ್ಟೆ, ಮಾಂಸ, ದಿನಸಿ, ತರಕಾರಿ… ಎಲ್ಲವೂ ಸಿದ್ದರಾಮಯ್ಯ ಅವರ 2.0 ಕೊಡುಗೆಗಳು ಎಂದು ಬಿಜೆಪಿ ಟೀಕಾಸ್ತ್ರ ಮಾಡಿದೆ.
ಇದನ್ನೂ ಓದಿ: ದೇಶದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಅಪ್ಪ-ಮಕ್ಕಳು ಯಾರ‍್ಯಾರು?