ಬೆಂಗಳೂರು : ಬಾಡಿಗೆಗೆ ಬಂದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಆರೋಪದಡಿ ಆಟೋ ಚಾಲಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿಯ ನಿವಾಸಿ ಮುಬಾರಕ್ ಬಂಧಿತ ಆರೋಪಿ. 18 ವರ್ಷದ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಘಟನೆ ಹಿನ್ನಲೆ : ಸಂತ್ರಸ್ತೆ ಪಾಲಿಟೆಕ್ನಿಕ್‌ವೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಳು. ಬಿಡುವಿನ ಸಮಯದಲ್ಲಿ ವಿವಾಹ ಸಮಾರಂಭದಲ್ಲಿ ಸ್ವಾಗತಕಾರಿಣಿ (ಹೋಸ್ಟಿಂಗ್/ವೆಲ್ಕಮಿಂಗ್) ಕೆಲಸ ಮಾಡಿಕೊಂಡಿದ್ದರು. ಡಿಸೆಂಬರ್ 10 ರಂದು ಹೆಗಡೆ ನಗರದಲ್ಲಿ ವಿವಾಹ ಸಮಾರಂಭವೊಂದಕ್ಕೆ ವೆಲ್‌ಕಮಿಂಗ್ ಮಾಡಲು ಬರುವಂತೆ ಪರಿಚಿತರು ಕರೆ ಮಾಡಿ ಯುವತಿಗೆ ಆಹ್ವಾನಿಸಿದ್ದರು.
ಓದಿ :ಉಜಿರೆಯಲ್ಲಿ ಉದ್ಯಮಿಯೊಬ್ಬರ 8 ವರ್ಷದ ಮಗ ಕಿಡ್ನಾಪ್!
ಅದರಂತೆ ವಿವಾಹ ಸಮಾರಂಭಕ್ಕೆ ಹೋಗಿದ್ದ ಯುವತಿ ತಡರಾತ್ರಿಯಾಗಿದ್ದರಿಂದ ಮಂಟಪದಲ್ಲೇ ತಂಗಿದ್ದಳು. ಮರುದಿನ ಬೆಳಗ್ಗೆ 6 ಗಂಟೆಗೆ ಥಣಿಸಂದ್ರ ಮುಖ್ಯರಸ್ತೆ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ ಆರೋಪಿ ಮುಬಾರಕ್ ಆಟೋದಲ್ಲಿ ಬಂದು ಎಲ್ಲಿಗೆ ಹೋಗಬೇಕು ಎಂದು ಯುವತಿಯನ್ನು ವಿಚಾರಿಸಿದ್ದ.
ನಾಗವಾರದ ಕಡೆ ಹೋಗಬೇಕು ಎಂದು ಹೇಳಿದಾಗ, ನಾನೂ ಅದೇ ಜಾಗಕ್ಕೆ ಹೋಗುವುದಾಗಿ ಹೇಳಿ ಯುವತಿಯನ್ನು ಆಟೋಗೆ ಹತ್ತಿಸಿಕೊಂಡಿದ್ದ. ನಾಗವಾರ ಸಿಗ್ನಲ್ ಬಳಿ ನಿಲ್ಲಿಸುವಂತೆ ಯುವತಿ ಸೂಚಿಸಿದರೂ, ವೇಗವಾಗಿ ಆಟೋವನ್ನು ಚಲಾಯಿಸಿಕೊಂಡು ಹೋಗಿದ್ದ.
ನಿಲ್ಲಿಸಿ ಎಂದು ಯುವತಿ ಚೀರಾಡಿದಾಗ, ನನ್ನ ಸ್ನೇಹಿತರೊಬ್ಬರು ನನಗೆ ಹಣ ಕೊಡಬೇಕು. ಅವರಿಂದ ಹಣ ಪಡೆದ ಕೂಡಲೇ ನೀಮಗೆ ಬೇಕಾದ ಜಾಗದಲ್ಲಿ ಬಿಡುತ್ತೇನೆ ಎಂದು ಹೇಳಿದ್ದ. ನಿರ್ಜನ ಪ್ರದೇಶವೊಂದರಲ್ಲಿ ಆಟೋ ನಿಲ್ಲಿಸಿ, ಆಟೋದೊಳಗಿನಿಂದ ಯುವತಿಯನ್ನು ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ನಂತರ ಯುವತಿಯನ್ನು ಅಲ್ಲೇ ಬಿಟ್ಟು ಆಟೋದಲ್ಲಿ ಪರಾರಿಯಾಗಿದ್ದ. ಸಂತ್ರಸ್ತೆ ನಿರ್ಜನ ಪ್ರದೇಶದಿಂದ ಹತ್ತಿರವಿದ್ದ ಮುಖ್ಯರಸ್ತೆಗೆ ನಡೆದುಕೊಂಡು ಬಂದು, ಅದೇ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದವರ ಸಹಾಯದ ಮೂಲಕ ಮನೆ ಸೇರಿದ್ದಳು.
ಆಟೋ ನಂಬರ್ ನೀಡಿತ್ತು ಆರೋಪಿ ಸುಳಿವು : ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿದ್ದ ಯುವತಿಯು, ಆರೋಪಿಯ ಆಟೋ ನಂಬರ್‌ನ ಪೊಲೀಸರಿಗೆ ತಿಳಿಸಿದ್ದಳು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಯುವತಿ ನೀಡಿದ ಆಟೋ ನಂಬರ್‌ನ ಪರಿಶೀಲಿಸಿದಾಗ ಆರೋಪಿ ಮುಬಾರಕ್‌ನ ಸುಳಿವು ಸಿಕ್ಕಿತ್ತು. ಕೂಡಲೇ ಆತನನ್ನು ಬಂಧಿಸಿದ್ದಾರೆ.