ನೆಲಮಂಗಲ: ರಾಜಕೀಯ ಪಕ್ಷದ ಪ್ರತಿನಿಧಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ ಲೆಕ್ಕ ವಿಚಕ್ಷಣ ತಂಡದ ಮುಖ್ಯಸ್ಥರಾದ ನೆಲಮಂಗಲ ಸರ್ಕಾರಿ ಪದವಿಪೂರ್ವ ಕಾಲೇಜು ದೈಹಿಕ ಶಿಕ್ಷಕ ಬಿ.ಜೆ. ಅಂಜನ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಜಿಲ್ಲಾಧಿಕಾರಿ ಆರ್. ಲತಾ ಆದೇಶ ಹೊರಡಿಸಿದ್ದಾರೆ.
ವಿಧಾನಸಭಾ ಚುನಾವಣೆ ಸಂಬಂಧ ಅಂಜನ್ ಕುಮಾರ್ ಅವರನ್ನು ಸೋಲೂರು ಹೋಬಳಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್ ನಲ್ಲಿ ಎಸ್.ಎಸ್.ಟಿ ತಂಡದ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ನಿತ್ಯ ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸುವ ಸಮಯದಲ್ಲಿ ಅಂಜನ್ ಕುಮಾರ್ ಅವರು ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು.
ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಅಡಿ ಶಿಸ್ತು ಕ್ರಮ ಕೈಗೊಳ್ಳಲು ಕೋರಿ ಸಹಾಯಕ ಚುನಾವಣಾಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಆರ್.ಲತಾ ಅವರು ಅಂಜನ್ ಕುಮಾರ್ ಅವರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿದ್ದಾರೆ.
ಚುನಾವಣಾ ಆಯೋಗದ ಅನುಮತಿ ಕಡ್ಡಾಯ: ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ವಿವಿಧ ಪಕ್ಷಗಳು ಪ್ರಚಾರ ಸಭೆಗಳನ್ನು ನಡೆಸಿ ಮತದಾರರ ಓಲೈಕೆಯಲ್ಲಿ ತೊಡಗಿವೆ. ಅಲ್ಲದೇ, ಪ್ರಚಾರ, ಮೆರವಣಿಗೆ, ಸಭೆ ಸಮಾರಂಭಗಳ ಆಯೋಜನೆಗೆ ಪ್ಲಾನ್ ರೂಪಿಸುತ್ತಿದ್ದು, ಈ ಎಲ್ಲ ಕಾರ್ಯಗಳಿಗೂ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುವವರು ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಅಲ್ಲದೇ, ಜಾತ್ರೆ, ಸಾರ್ವಜನಿಕವಾಗಿ ನಡೆಯುವ ಇತರ ಸಮಾರಂಭಗಳಿಗೂ ಈ ಅನುಮತಿ ಕಡ್ಡಾಯವಾಗಿದೆ. ಜೊತೆಗೆ ಚುನಾವಣಾ ಸಭೆ, ಜಾಥಾ, ಪ್ರಚಾರ ಸಾಮಗ್ರಿ ಅಳವಡಿಕೆ, ವೇದಿಕೆ, ಮೈಕ್, ವಾಹನ, ಸಮಾರಂಭ ಮುಂತಾದ ರೀತಿಯ ಕಾರ್ಯಗಳಿಗೂ ಅರ್ಜಿ ಸಲ್ಲಿಸಿ ಅನುಮತಿ ಪತ್ರ ಪಡೆಯಬೇಕು. ಇಲ್ಲವಾದಲ್ಲಿ ಈ ನೀತಿ ಉಲ್ಲಂಘಿಸಿದವರ ವಿರುದ್ಧ ಕ್ರಮ ಜಾರಿಗೊಳಿಸಲಾಗುತ್ತದೆ.
ಶಾಸಕ ರೇಣುಕಾಚಾರ್ಯ ವಿರುದ್ಧ ದಾಖಲಾಗಿತ್ತು ಪ್ರಕರಣ: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸಭೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 2ರಂದು ಮಧ್ಯಾಹ್ನ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ್ದ ಶಾಸಕ ರೇಣುಕಾಚಾರ್ಯ, ಕಾರ್ಯಕರ್ತರು ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಕ್ಷೇತ್ರದ ಜನರನ್ನು ಸೇರಿಸಿ ಮಾತನಾಡುತ್ತಿದ್ದರು.
ಸಭೆ ವೇಳೆ ದಾಳಿ ಮಾಡಿದ್ದ ಚುನಾವಣಾಧಿಕಾರಿಗಳು ಶಾಸಕರ ಭಾಷಣದ ವೇಳೆ ಮೈಕ್ ಪಡೆದು ಕಾರ್ಯಕ್ರಮ ನಿಲ್ಲಿಸಿದ್ದರು. ಪರಿಶೀಲನೆ ವೇಳೆ ಸಂತೋಷ್ ಎಂಬುವವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಭಿಕರಿಗೆ ಊಟದ ವ್ಯವಸ್ಥೆ ಸಹ ಮಾಡಿರುವುದು ಪತ್ತೆಯಾಗಿತ್ತು. ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಚುನಾವಣಾಧಿಕಾರಿ ವಿಜಯ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಶಾಸಕ ರೇಣುಕಾಚಾರ್ಯ, ಕಾರ್ಯಕ್ರಮ ಆಯೋಜಕ ಸಂತೋಷ ಎಂಬುವವರ ಮೇಲೆ ಮೊನ್ನೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ರೇಡಿಯೋ, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿನ ಜಾಹೀರಾತುಗಳ ಮೇಲೆ ನಿಗಾ: ಉಜ್ವಲ್ ಕುಮಾರ್ ಘೋಷ್