ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಇಂದು ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದೆ.
ಒಂದೆಡೆ ಅತೃಪ್ತ ಶಾಸಕರು ನಿನ್ನೆ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ ವಿಧಾನಸೌಧಕ್ಕೆ ಭೇಟಿ ನೀಡಿ ಸ್ಪೀಕರ್ಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ರು. ಆದ್ರೆ ಇಂದು ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪಡಿಸಲೇಬೇಕಾದ ಕಾರಣ ವಿಧಾನಸೌಧದಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆಯಿದೆ.
ಹೀಗಾಗಿ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗೃತ ಕ್ರಮವಾಗಿ ವಿಧಾನಸೌಧ, ವಿಕಾಸಸೌಧ, ರಾಜಭವನ ಸುತ್ತಮುತ್ತ ಹೈ ಅಲರ್ಟ್ ಘೋಷಣೆಯಾಗಿದೆ. ಡಿಜಿ ಐಜಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, 7 ವಿಭಾಗದ ಡಿಸಿಪಿ ಹಾಗೂ ಎಸಿಪಿಗಳು, ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ಸ್, ಕೆಎಸ್ಆರ್ಪಿ ತುಕಡಿ, ಹೋಮ್ ಗಾರ್ಡ್, ಹೊಯ್ಸಳ ಸೇರಿ ಒಟ್ಟು 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಮತ್ತೊಂದೆಡೆ ವಿಪ್ ಜಾರಿಯಾದ ಹಿನ್ನೆಲೆ ಮುಂಬೈಯಲ್ಲಿರುವ ಅತೃಪ್ತ ಶಾಸಕರು ವಿಧಾನಸೌಧ ಅಧಿವೇಶನಕ್ಕೆ ಬಂದರೆ ಈ ವೇಳೆ ಭದ್ರತೆ ವಹಿಸಲು ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಸಿಸಿಬಿ ಡಿಸಿಪಿ ಗಿರೀಶ್ ಭದ್ರತೆಯ ಹೊಣೆ ವಹಿಸಿಕೊಂಡಿದ್ದಾರೆ.