ಬೆಂಗಳೂರು : ಮಂಗಳವಾರ ನಡೆದ ಪರಿಷತ್ ಗಲಾಟೆ ಸಂಬಂಧ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ.
ಶೋಕಾಸ್ ನೋಟಿಸ್‌ನಲ್ಲಿ 'ಮಂಗಳವಾರದ ಪರಿಷತ್ ಅಧಿವೇಶನದಲ್ಲಿ ನಡೆದ ಘಟನಾವಳಿಗಳನ್ನು ನೋಡಿದ್ರೆ ನಿಮ್ಮ ಕರ್ತವ್ಯ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ನಿಮ್ಮ ವರ್ತನೆ ವಿಧಾನಮಂಡಲ ನೌಕರನಿಗೆ ತಕ್ಕುದಾಗಿರಲಿಲ್ಲ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ನಿಯಮ ಬಾಹಿರವಾಗಿ, ಬೇಜವಾಬ್ದಾರಿ ಹಾಗೂ ಕರ್ತವ್ಯ ನಿರ್ಲಕ್ಷತನದ ನಡವಳಿ ಮತ್ತು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿದ್ದೀರಿ.
ಈ ಹಿನ್ನೆಲೆ ನಿಮ್ಮ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ರೀತಿ ಕ್ರಮ ವಹಿಸಬಾರದೇಕೆ' ಎಂದು ಪ್ರಶ್ನಿಸಿ 48 ತಾಸಿನೊಳಗೆ ಸ್ಪಷ್ಟೀಕರಣ ನೀಡುವಂತೆ ಆದೇಶಿಸಿದ್ದಾರೆ. ಪರಿಷತ್ ಅಧಿವೇಶನದಲ್ಲಿ ನಡೆದ ಅಹಿತಕರ ಘಟನೆಗಳ ಸಂಬಂಧ ಆಡಳಿತ ಪಕ್ಷದ ಸದಸ್ಯರು ಸಭಾಪತಿಯಾದ ನನ್ನನ್ನು ಸದನ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಕಾರ್ಯ ಕಲಾಪಗಳಿಗೆ ವ್ಯತಿರಿಕ್ತ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆದುಕೊಂಡ ಘಟನೆಗಳು ಸಾಕಷ್ಟು ಟೀಕೆಗೆ ಒಳಗಾಗಿದೆ.
ಇದರಿಂದ ಶತಮಾನದ ಇತಿಹಾಸ, ಗೌರವ, ಪರಂಪರೆ ಇರುವ ವಿಧಾನ ಪರಿಷತ್‌ಗೆ ಧಕ್ಕೆಯಾಗಿದೆ ಎಂದು ತಿಳಿಸಿದ್ದಾರೆ. ಸದನದ ಘಟನಾವಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ನೀವೆಲ್ಲ, ತಾನು ಸದನದ ಒಳಗೆ ಬರುವ ಮುನ್ನ ಹಾಗೂ ಬಳಿಕ ನನ್ನ ಅನುಪಸ್ಥಿತಿಯಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವರದಿ ನೀಡುವಂತೆ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಕೋರಂ ಬೆಲ್ ಚಾಲನೆಯಲ್ಲಿದ್ದಾಗಲೂ, ನಿಯಮ ಬಾಹಿರವಾಗಿ ಉಪ ಸಭಾಪತಿಯ ಪೀಠ ಅಲಂಕರಿಸಿರುವುದು, ಸದನದ ಪ್ರವೇಶ ದ್ವಾರವನ್ನು ಮುಚ್ಚಿ ನನ್ನ ಪ್ರವೇಶಕ್ಕೆ ನಿರ್ಬಂಧಿಸಿರುವುದು, ನಿಯಮ ಬಾಹಿರ ಪೀಠ ಅಲಂಕರಿಸಿದ್ದ ಉಪಸಭಾಪತಿಯವರಿಗೆ ಸರಿಯಾಗಿ ಮಾಹಿತಿ ನೀಡದೆ ಸದನ ಮುಂದುವರಿಸುವ ಚಿತಾವಣೆ ರೀತಿಯ ದಾಖಲೆಗಳನ್ನು ಒದಗಿಸಿರುವುದು ಸೇರಿ ತಮ್ಮ ಕರ್ತವ್ಯ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿರುವ ಹಲವು ಅಂಶಗಳನ್ನು ನಾನು ಗಮನಿಸಿದ್ದೇನೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.