ಬೆಂಗಳೂರು: ಮತ್ತೋರ್ವ ಜೆಡಿಎಸ್ ಮುಖಂಡ ಕಾಂಗ್ರೆಸ್ ಸೇರುವ ತವಕದಲ್ಲಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ವಿವಿಧ ಪಕ್ಷಗಳಿಂದ ಇತರ ಪಕ್ಷಕ್ಕೆ ಜಿಗಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದೆರಡು ತಿಂಗಳ ಅವಧಿ ಜೆಡಿಎಸ್ ಪಾಲಿಕೆ ಕಹಿ ದಿನಗಳಾಗಿ ಪರಿಣಮಿಸಿದೆ. ಏಕೆಂದರೆ ಶಾಸಕರು, ಮಾಜಿ ಸಚಿವರು, ಜೆಡಿಎಸ್ನಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಸಾಕಷ್ಟು ಮಂದಿ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ.
ಇದುವರೆಗೂ ಬಯಲುಸೀಮೆ ಹಾಗೂ ಹಳೆ ಮೈಸೂರು ಭಾಗದ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡಿದ್ದರು. ಇದೀಗ ರಾಜ್ಯದ ಇತರ ಭಾಗದವರು ಸಹ ಕಾಂಗ್ರೆಸ್ ನಾಯಕರ ಸಂಪರ್ಕ ಸಾಧಿಸುತ್ತಿದ್ದಾರೆ. ಜೆಡಿಎಸ್ ಪಾಲಿಗೆ ಇದೊಂದು ಕಹಿಸುದ್ದಿಯಾಗಿ ಪರಿಣಮಿಸುತ್ತಿದೆ.
ಮತ್ತೊಬ್ಬ ನಾಯಕ ಮಾತುಕತೆ:
ಕಳೆದ ವರ್ಷ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದ ಅಶೋಕ್ ಪೂಜಾರಿ ಇದೀಗ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. ಮಾನಸಿಕವಾಗಿ ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಅವರು, ಕಳೆದ ವರ್ಷ ಲೋಕಸಭೆ ಚುನಾವಣೆ ವೇಳೆಯಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಬೇಕಿತ್ತು. ಆದರೆ, ಕೆಲ ಕಾರಣಗಳಿಂದ ದೂರ ಉಳಿದಿದ್ದರು.
ಕೆಲ ತಿಂಗಳ ಹಿಂದೆ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಂದರ್ಭದಲ್ಲೇ ಅಶೋಕ್ ಪಾಟೀಲ್ ಸಹ ಕೈ ಹಿಡಿಯಬೇಕಿತ್ತು. ಆದರೆ, ವಿಳಂಬವಾಗಿ ಈಗ ಕಾಂಗ್ರೆಸ್ ಸೇರ್ಪಡೆಗೆ ತರಾತುರಿಯಲ್ಲಿ ಓಡಾಡುತ್ತಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಸಮಾರಂಭವೊಂದರಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಅಶೋಕ್ ಪೂಜಾರಿ, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಗೆ ಮುಂದಾಗಿದ್ದಾರೆ.
ಕಳೆದ ಗೋಕಾಕ್ ಉಪಚನಾವಣೆಯಲ್ಲಿ ಕಾಂಗ್ರೆಸ್ ಅಶೋಕ್ ಪೂಜಾರಿ ಕಣಕ್ಕಿಳಿಸಲು ಡಿಕೆಶಿ ಆಸಕ್ತಿ ತೋರಿದ್ರು. ಸತೀಶ್ ಜಾರಕಿಹೊಳಿ ವಿರೋಧದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಇದೀಗ ಅಶೋಕ್ ಪೂಜಾರಿಯನ್ನ ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಎಲ್ಲ ಕಾಂಗ್ರೆಸ್ ನಾಯಕರೂ ಒಪ್ಪಿದ್ದಾರೆ ಎನ್ನಲಾಗಿದೆ.
ಲಖನ್ ದೂರ:
ಸತೀಶ್ ಜಾರಕಿಹೊಳಿ ಹೊರತುಪಡಿಸಿದರೆ ಸಂಪೂರ್ಣ ಜಾರಕಿಹೊಳಿ ಕುಟುಂಬ ಇದೀಗ ಬಿಜೆಪಿ ಪಕ್ಷದಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಗೋಕಾಕ್ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದು, 4ನೇ ಗೆಲುವಿನ ಉತ್ಸಾಹದಲ್ಲಿದ್ದ ಸಂದರ್ಭ ಇವರಿಗೆ ಎದುರಾಳಿಯಾಗಿ ಕಳೆದ ಮೂರು ಅವಧಿ (2008,2013,2018) ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದ ಅಶೋಕ್ ಪೂಜಾರಿಯನ್ನೇ ಕಾಂಗ್ರೆಸ್ನಿಂದ ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಕಡೆಯ ಕ್ಷಣದಲ್ಲಿ ಸತೀಶ್ ಜಾರಕಿಹೊಳಿ ವಿರೋಧ ಎದುರಾಗಿದ್ದರಿಂದ ಜಾರಕಿಹೊಳಿ ಕುಟುಂಬದ ಮತ್ತೋರ್ವ ಸದಸ್ಯ ಲಖನ್ ಜಾರಕಿಹೊಳಿ ಅಭ್ಯರ್ಥಿಯಾದರು. ಅಶೋಕ್ ಮತ್ತೊಮ್ಮೆ ಜೆಡಿಎಸ್ನಿಂದ ಕಣಕ್ಕಿಳಿದು ಮೂರನೇ ಸ್ಥಾನ ಪಡೆದಿದ್ದರು.
ಲಖನ್ ಸಂಕಟ:
ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಸೋದರ ರಮೇಶ್ ವಿರುದ್ಧ ಸೋತ ನಂತರ ಕಾಂಗ್ರೆಸ್ ಪಕ್ಷದಿಂದಲೂ ವಿಮುಖರಾಗುತ್ತಾ ಬಂದ ಲಖನ್ ಜಾರಕಿಹೊಳಿ ಸದ್ಯ ಬಹುತೇಕ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಕಾರ್ಯನಿರ್ವಹಿಸಿದ್ದರು. ಇದೀಗ ಬಿಜೆಪಿಯಲ್ಲೇ ನೆಲೆ ಕಂಡುಕೊಳ್ಳಲು ಬಯಸಿರುವ ಅವರು, ಬೆಳಗಾವಿಯಿಂದ ವಿಧಾನ ಪರಿಷತ್ಗೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.
ಬೆಳಗಾವಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ವಿಧಾನ ಪರಿಷತ್ ಪ್ರವೇಶಿಸಿರುವ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ವಿವೇಕ್ ಪಾಟೀಲ್ ಅವಧಿ 2022ರ ಜನವರಿ 5ಕ್ಕೆ ಮುಕ್ತಾಯವಾಗಲಿದೆ. ಈ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲಖನ್ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆ ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಗೋಕಾಕ್ ನಲ್ಲಿ ಅಭ್ಯರ್ಥಿ ಕೊರತೆ ಎದುರಾಗಲಿದೆ. ಜೆಡಿಎಸ್ ತೊರೆಯಲು ತುದಿಗಾಲಲ್ಲಿ ನಿಂತಿರುವ ಅಶೋಕ್ ಪೂಜಾರಿಯನ್ನು ಸಲೀಸಾಗಿ ಬರಮಾಡಿಕೊಂಡು ಅಭ್ಯರ್ಥಿಯಾಗಿಸುವುದು ಕಾಂಗ್ರೆಸ್ ನಾಯಕರ ನಿಲುವಾಗಿದೆ.